This is the title of the web page

ಆದಿತ್ಯನಾಥ ರ್ಯಾಲಿಯಲ್ಲಿ ಬಿಡಾಡಿ ದನಗಳು

ಲಖನೌ, 23- ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ ಅವರ ರ್‍ಯಾಲಿಯ ಸ್ಥಳವಾದ ತೆರೆದ ಮೈದಾನದಲ್ಲಿ ಮಂಗಳವಾರ ಬಿಡಾಡಿ ದನಗಳನ್ನು ಬಿಡುವ ಮೂಲಕ ತಮಗಿರುವ ತೊಂದರೆಗಳ ಬಗ್ಗೆ ತಿಳಿಸಲು ರೈತರು ಪ್ರಯತ್ನಿಸಿದ್ದಾರೆ.

ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ರೈತ ಮುಖಂಡ ರಮಣದೀಪ್ ಸಿಂಗ್ ಮಾನ್ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ನೂರಾರು ಜಾನುವಾರುಗಳು ತೆರೆದ ಮೈದಾನದಲ್ಲಿ ಇರುವುದನ್ನು ತೋರಿಸುತ್ತದೆ. ಬಿಡಾಡಿ ದನಗಳ ಹಾವಳಿ ಉತ್ತರ ಪ್ರದೇಶ ಚುನಾವಣೆಯ ಪ್ರಮುಖ ವಿಷಯಗಳಲ್ಲಿ ಒಂದು.

“ಬಾರಾಬಂಕಿಯಲ್ಲಿ ಆದಿತ್ಯನಾಥ ಅವರ ಕಾರ್ಯಕ್ರಮಕ್ಕೂ ಮುನ್ನ ರೈತರು ನೂರಾರು ಜಾನುವಾರುಗಳನ್ನು ತಮ್ಮ ಹೊಲಗಳಿಂದ ಓಡಿಸಿ ರ್‍ಯಾಲಿ ನಡೆಯುವ ಸ್ಥಳದ ಬಳಿ ಬಿಟ್ಟರು. ಈ ಬಿಡಾಡಿ ದನಗಳನ್ನು ನಿರ್ವಹಿಸಲು ರೈತರಿಗೆ ದಾರಿ ಕಾಣಲಿಲ್ಲ” ಎಂದು ರಮಣದೀಪ ಸಿಂಗ್ ಮಾನ್ ವೀಡಿಯೊ ಪೋಸ್ಟ್ ಮಾಡುವಾಗ ಟ್ವೀಟ್ ಮಾಡಿದ್ದಾರೆ.

“ಐದು ವರ್ಷಗಳಿಂದ ಉತ್ತರ ಪ್ರದೇಶ ಸರ್ಕಾರವು ಬಿಡಾಡಿ ದನಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳ  ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮಕ್ಕೆ ಮೊದಲು ಬಿಜೆಪಿ ಯಾವ ಪರಿಹಾರವನ್ನು ತರುತ್ತದೆ ಎಂಬುದನ್ನು ರೈತರು ನೋಡಬೇಕೆಂದು ಬಯಸಿದ್ದರು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆದರೆ ರಾಜ್ಯದಲ್ಲಿ ಬಿಜೆಪಿಯ ಅಧಿಕಾರವನ್ನು ಉಳಿಸಿಕೊಂಡರೆ ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದನ್ನು ಆದಿತ್ಯನಾಥ ಸಭೆಯಲ್ಲಿ ನೆನಪಿಸಿದರು.

ಕಳೆದ ವಾರ ರ್ಯಾಲಿಯೊಂದರಲ್ಲಿ “ಮಾರ್ಚ 10 ರ ನಂತರ ಬೀದಿ ಪ್ರಾಣಿಗಳಿಂದ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಹೊಸ ವ್ಯವಸ್ಥೆಯನ್ನು ಮಾಡಲಾಗುವುದು. ಹಾಲು ನೀಡದ ಪ್ರಾಣಿಗಳ ಸಗಣಿಯಿಂದ ಆದಾಯವನ್ನು ಗಳಿಸುವ ವ್ಯವಸ್ಥೆಯನ್ನು ಮಾಡಲಾಗುವುದು” ಎಂದು ಪ್ರಧಾನಿ ಮೋದಿ ಹೇಳಿದ್ದರು.

You might also like
Leave a comment