This is the title of the web page

ಮಹಿಳೆ ಸ್ನಾನದ ವಿಡಿಯೋ ವೈರಲ್ ಮಾಡಿದ ಬಿಜೆಪಿ ನಾಯಕ ನಾಪತ್ತೆ

ಹೊನ್ನಾವರ (ಕಾರವಾರ), 24- ವಿವಾಹಿತ ಮಹಿಳೆಯೊಬ್ಬಳ ಸ್ನಾನ ಮಾಡುತ್ತಿದ್ದ ವಿಡಿಯೋ ವೈರಲ್ ಮಾಡಿದ್ದ ಹೊನ್ನಾವರ ನಗರ ಬಿಜೆಪಿ ಘಟಕದ ಅಧ್ಯಕ್ಷ ಉಮೇಶ ಸಾರಂಗ ಬಂಧನಕ್ಕೆ ಹೆದರಿ ನಾಪತ್ತೆಯಾಗಿದ್ದಾನೆ.

ತನ್ನ ವಿರುದ್ಧ ಪೊಲೀಸರಿಗೆ ಮಹಿಳೆ ದೂರು ದಾಖಲಿಸಿರುವದು ದೃಢವಾಗುತ್ತಿದ್ದಂತೆ ಹೊನ್ನಾವರ ಸೇರಿದಂತೆ ಕಾರವಾರ ಜಿಲ್ಲೆಯಲ್ಲಿ ಬಿಜೆಪಿಯ ದೊಡ್ಡ ದ್ವನಿಯಾಗಿದ್ದ ಸಾರಂಗ ಈಗ ತಲೆಮಾರಿಸಿಕೊಂಡಿದ್ದು ಪೊಲೀಸರು ಅವನ ಶೋಧದಲ್ಲಿದ್ದಾರೆ. ಈ ವಿಷಯ ಈಗ ಉತ್ತರಕನ್ನಡ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.

ದೂರುದಾರ ಮಹಿಳೆಯು ಸಾರಂಗನ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ಪರಿಚಯವಾಗಿತ್ತೆಂದು ಆಕೆ ದೂರಿನಲ್ಲಿ ಹೇಳಿದ್ದಾಳೆ. ತಾನು ಸ್ನಾನ ಮಾಡುತ್ತಿರುವದನ್ನು ವೀಡಿಯೋ ಮಾಡಿ ವಾಟ್ಸಪ್‌ನಲ್ಲಿ ಕಳಿಸಿಕೊಡುವಂತೆ ಸಾರಂಗ್ ಪೀಡಿಸುತ್ತಿದ್ದ. ಇಲ್ಲದಿದ್ದರೆ ತನ್ನೊಂದಿಗೆ ಸಲಿಗೆಯಿಂದಿರುವುದನ್ನು ನಿನ್ನ ಗಂಡನಿಗೆ ತಿಳಿಸುತ್ತೇನೆಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದನೆಂದು ಮಹಿಳೆ ದೂರಿದ್ದಾಳೆ.

ಆತನ ಬೆದರಿಕೆಗೆ ಹೆದರಿ 3-4 ತಿಂಗಳ ಹಿಂದೆ ನಾನು ಸ್ನಾನ ಮಾಡುತ್ತಿರುವ ವೀಡಿಯೋ ಶೂಟ್ ಮಾಡಿ ಆತನಿಗೆ ಕಳಿಸಿದ್ದೆ ಎಂದು ಆಕೆ ಹೇಳಿದ್ದಾಳೆ.

ಇಷ್ಟಾದರೂ ಸಾರಂಗ್ ಪೀಡಿಸುತ್ತಿದ್ದ. ಹೀಗೆ ನೀನು ಪದೇ ಪದೇ ಮನೆಯತ್ತ ಬರುವುದು, ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ. ನನ್ನ ಗಂಡನಿಗೆ ಮತ್ತು ನನ್ನ ಕುಟುಂಬದವರಿಗೆ ಇದೆಲ್ಲ ಗೊತ್ತಾದರೆ ಸಮಸ್ಯೆಯಾಗುತ್ತದೆ. ನೀನು ನನ್ನೊಂದಿಗೆ ಇನ್ನು ಮುಂದೆ ಮಾತಾಡಬೇಡ ಎಂದು ಬಿಜೆಪಿ ನಗರಾಧ್ಯಕ್ಷ ಸಾರಂಗನಿಗೆ ಹೇಳಿ ಒಂದು ತಿಂಗಳಿಂದ ಆಕೆ ಆತನ ಸಂಪರ್ಕ ಕಡಿದುಕೊಂಡಿದ್ದಳು. ಇದರಿಂದ ಕೆರಳಿದ ಸಾರಂಗ ಆಕೆಯ ಸ್ನಾನ ಮಾಡುವ ವಿಡಿಯೋ ವೈರಲ್ ಮಾಡಿದ್ದ ಎಂದು ಮಹಿಳೆ ಪೋಲೀಸರಿಗೆ ದೂರು ನೀಡಿದ್ದಾಳೆ.

You might also like
Leave a comment