This is the title of the web page

ಪ್ರವಾದಿಗಳ ಕುರಿತ ಅವಹೇಳನಕ್ಕೆ ಭುಗಿಲೆದ್ದ ಆಕ್ರೋಷ; ಬಿಜೆಪಿ ರಾಷ್ಟ್ರೀಯ ವಕ್ತಾರೆ ಅಮಾನತ್ತು

ಹೊಸದಿಲ್ಲಿ, ೫- ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ ಶರ್ಮಾ ಹಾಗೂ ಪಕ್ಷದ ಹೊಸದಿಲ್ಲಿಯ ಮಾಧ್ಯಮ ಮುಖ್ಯಸ್ಥ ನವೀನ ಕುಮಾರ ಜಿಂದಾಲ್ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

ಸುದ್ದಿ ಚಾನಲ್‌ ಒಂದರಲ್ಲಿ ಪ್ರವಾದಿ ಮುಹಮ್ಮದ ಮತ್ತು ಅವರ ಪತ್ನಿ ಹಾಗೂ ಇಸ್ಲಾಮ ಧರ್ಮದ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ ನೂಪುರ ಮತ್ತು ಜಾಲತಾಣದಲ್ಲಿ ಹೇಳಿಕೆ ನೀಡಿದ ಜಿಂದಾಲ್ ಇಬ್ಬರನ್ನೂ ಸಸ್ಪೆಂಡ್ ಮಾಡಲಾಗಿದೆ.

ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಸರಕುಗಳನ್ನು ನಿಷೇಧಿಸುವ ಕುರಿತಾಗಿ ಟ್ಟಿಟ್ಟರ್ ಅಭಿಯಾನಗಳು ನಡೆದಿದ್ದು ಕುವೈತ, ಸೌದಿ ಅರೇಬಿಯಾ ಮತ್ತು ಬಹರೇನ್ ನ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದ ಭಾರತೀಯ ವಸ್ತುಗಳನ್ನು ತೆಗೆದು ಹಾಕಿದ ವರದಿಗಳು ಬಂದಿವೆ. ಅದರಂತೆ ಮೋದಿ ವಿರೋಧಿ ಹ್ಯಾಶ್ ಟ್ಯಾಗ್ ನಡೆಸಲಾಗುತ್ತಿದೆ. ಈ ನಡುವೆ ಅವಹೇಳನಕಾರಿ ಹೇಳಿಕೆಗಳ ಬಳಿಕ ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಲಭೆಗಳೂ  ನಡೆದಿವೆ.

ಅಮಾನತ್ತು ಆದೇಶ ಹೊರಬೀಳುವ ಮುನ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಅವರ ಹೇಳಿಕೆ ಹೊರಬಿದ್ದಿತ್ತು. ಯಾವುದೇ ಧರ್ಮವನ್ನು ಅವಹೇಳನ ಮಾಡುವ ಚಿಂತನೆಯನ್ನು ತಮ್ಮ ಪಕ್ಷ ಸ್ಪಷ್ಟವಾಗಿ ವಿರೋಧಿಸುವುದಾಗಿ ಅರುಣ ಸಿಂಗ್ ಸ್ಪಷ್ಟನೆ ನೀಡಿದ್ದರು. ಭಾರತೀಯ ಜನತಾ ಪಕ್ಷ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮ ಹಾಗೂ ಧಾರ್ಮಿಕ ನಾಯಕರ ಅವಹೇಳನವನ್ನು ಬಿಜೆಪಿ ಖಂಡಿಸುತ್ತದೆ. ಈ ರೀತಿಯ ವ್ಯಕ್ತಿಗಳು ಅಥವಾ ಸಿದ್ದಾಂತವನ್ನು ಬಿಜೆಪಿ ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.

ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಹಲವು ಧರ್ಮಗಳು ಅರಳಿವೆ, ಹರಡಿವೆ, ಉಳಿದು ಬೆಳೆದಿವೆ. ಭಾರತೀಯ ಜನತಾ ಪಕ್ಷ ಕೂಡಾ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿ ಅಥವಾ ಸಿದ್ದಾಂತವನ್ನು ಬಿಜೆಪಿ ಖಂಡಿಸುತ್ತದೆ. ಭಾರತದ ಸಂವಿಧಾನವು ದೇಶದ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಅನುಸರಿಸುವ ಹಾಗೂ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ನೀಡಿದೆ. ಬಿಜೆಪಿ ಕೂಡಾ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ ಎಂದು ಸಿಂಗ್ ಹೇಳಿದ್ದರು.

ಅರುಣ ಸಿಂಗ್ ಅವರ ಈ ಪತ್ರಿಕಾ ಹೇಳಿಕೆಯಲ್ಲಿ ಎಲ್ಲಿಯೂ ಕೂಡಾ ಬಿಜೆಪಿ ವಕ್ತಾರರ ಅವಹೇಳನಕಾರಿ ಹೇಳಿಕೆ ಕುರಿತಂತೆ ಪ್ರಸ್ತಾಪ ಆಗಿರಲಿಲ್ಲ.

ಈ ನಡುವೆ, ರಝಾ ಅಕಾಡೆಮಿಯ ಮುಂಬೈ ಘಟಕದ ಜಂಟಿ ಕಾರ್ಯದರ್ಶಿ ಇರ್ಫಾನ ಶೇಖ ಎಂಬುವರು ನೂಪುರ ಶರ್ಮಾ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಗ್ಯಾನ್‌ವಾಪಿ ವಿವಾದಕ್ಕೆ ಸಂಬಂಧಿಸಿದಂತೆ ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ನೂಪುರ ಶರ್ಮಾ ಅವರು ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈ ಎಫ್‌ಐಆರ್ ದಾಖಲಾಗಿದೆ. ಇನ್ನು ಜಿಂದಾಲ್ ಅವರು ದೇಶದ ಹಿತಾಸಕ್ತಿಗೆ ವಿರುದ್ಧವಾದ ಟ್ವೀಟ್ ಮಾಡಿದ್ದಾರೆ ಎಂದೂ ಆಪಾದಿಸಲಾಗಿದೆ.

ಶರ್ಮಾ ಹಾಗೂ ಜಿಂದಲ್ ಅವರ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಕೊಲ್ಲಿ‌ ರಾಷ್ಟ್ರಗಳಲ್ಲಿ ಮೇಡ್ ಇನ್ ಇಂಡಿಯಾ ಸರಕುಗಳನ್ನು ನಿಷೇಧಿಸುವ ಕುರಿತಾಗಿ ಟ್ಟಿಟ್ಟರ್ ಅಭಿಯಾನಗಳು ನಡೆಯುತ್ತಿವೆ. ಈ ಕೂಡಲೇ ಇಬ್ಬರೂ ನಾಯಕರನ್ನು ಬಂಧಿಸಿ ಜೈಲಿಗಟ್ಟಿ, ಇಲ್ಲವಾದ್ರೆ ರಸ್ತೆಗಿಳಿದು ಹೋರಾಟ ಮಾಡ್ತೀವಿ ಎಂದು ನೆಟ್ಟಿಗರು ಬೆದರಿಕೆ ಹಾಕುತ್ತಿದ್ದಾರೆ.

ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಬಿಜೆಪಿಯು ಈ ಇಬ್ಬರೂ ನಾಯಕರ ಹೇಳಿಕೆಯಿಂದ ದೂರ ಉಳಿದು ಇಬ್ಬರನ್ನೂ ಪಕ್ಷದಿಂದ ಅಮಾನತು ಮಾಡಿದೆ.

You might also like
Leave a comment