ಬೆಳಗಾವಿ: ಚಿಕ್ಕೋಡಿ ತಾಲೂಕು ಜೈನಾಪುರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಬಳಿ ಖ್ಯಾತ ಉದ್ಯಮಿಯೊಬ್ಬರ ಶವ ಕಾರಿನಲ್ಲಿ ಪತ್ತೆಯಾಗಿದೆ.
ಚಿಕ್ಕೋಡಿಯ ಖ್ಯಾತ ಗ್ರಾನೈಟ್ ಉದ್ಯಮಿಯಾಗಿರುವ, ಮುಲ್ಲಾ ಪ್ಲಾಟ್ ನಿವಾಸಿ ಫೈರೋಜ ಬಡಗಾವಿ (40) ಅವರ ಶವ ಬುಧವಾರ ಸಂಪೂರ್ಣ ಭಸ್ಮವಾದ ಕಾರಿನಲ್ಲಿ ಪತ್ತೆಯಾಗಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಚಾಲಕನ ಸೀಟಿನಲ್ಲಿ ಇದ್ದ ಫೈರೋಜ ಅವರು ಬೆಂದು ಹೋಗಿದ್ದಾರೆ.
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿರುವ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಸಾವು ಹಲವು ವದಂತಿಗಳಿಗೆ ಕಾರಣವಾಗಿದೆ. ಬುಧವಾರ ಮಧ್ಯಾಹ್ನ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ಬೆಂಕಿಗೆ ಆಹುತಿಯಾದಂತೆ ಕಾಣುತ್ತಿದ್ದರೂ ಸಹಾ ಆತನ ಕುಟುಂಬದವರು ನೀಡಿರುವ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.