This is the title of the web page

ಅಮಿತ ಷಾ ಮೇಲೆಯೂ ಪ್ರಕರಣ ದಾಖಲಿಸಿ-ಗಡಾದ

ಬೆಳಗಾವಿ, 12- ದೇಶದಲ್ಲಿ ಒಬ್ಬರಿಗೊಂದು ಕಾನೂನು ಇನ್ನೊಬ್ಬರಿಗೊಂದು ಕಾನೂನು ಇರಬಾರದು. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದಂತೆ ಕಳೆದ ವರ್ಷ ಬೆಳಗಾವಿಯಲ್ಲಿ ಜನಸೇವಕ ಸಮಾವೇಶ ನಡೆಸಿದ ಬಿಜೆಪಿ ಮುಖಂಡರ ಮೇಲೂ ಕ್ರಮ ಕೈಗೊಳ್ಳಲಿ. ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ಇನ್ನಿತರರ ಮೇಲೆ ಸಹ ಪ್ರಕರಣ ದಾಖಲಿಸಲಿ ಎಂದು ಮಾಹಿತಿ ಹಕ್ಕು ಹಾಗೂ ಕಾಂಗ್ರೆಸ್ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.

ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಧ್ಯಮಗಳಿಗೆ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದೇಶದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ, ಇತರೆ ಪಕ್ಷಗಳು ಹಾಗೂ ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಪ್ರಜೆವರೆಗೂ ಎಲ್ಲರಿಗೂ ಒಂದೇ ಕಾನೂನು ಇದೆ. ಈ ನಿಟ್ಟಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಾಯರಕ ಪೈಕಿ 31ಜನರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿದ್ದು ಸ್ವಾಗತಾರ್ಹ. ಅದೇ ರೀತಿ ಕಳೆದ ವರ್ಷ ಜನವರಿ 17 ರಂದು ಬೆಳಗಾವಿಯಲ್ಲಿ ಬಿಜೆಪಿಯವರು ಜನಸೇವಕ ಸಮಾವೇಶ ನಡೆಸಿದ್ದರು. ಇದರಲ್ಲಿ ಕೇಂದ್ರ ಸಚಿವ ಅಮಿತ ಷಾ ಸೇರಿದಂತೆ ಅಂದಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿಗಳು ಎಲ್ಲರೂ ಭಾಗಿಯಾಗಿದ್ದರು. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲಾಗಿತ್ತು‌. ಆ ಸಂದರ್ಭದಲ್ಲಿಯೂ ಕೋವಿಡ್ ಹೆಚ್ಚಿತ್ತು. ಆಗ  ಪ್ರತಿನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರು.

ಆಗ ಸಮಾವೇಶ ರದ್ದು ಮಾಡುವಂತೆ ಕಾಂಗ್ರೆಸ್ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಕೋವಿಡ್ ನಿಯಮ ಉಲ್ಲಂಘಿಸಿರುವ ಹಿನ್ನೆಲೆ ಜನಸೇವಕ ಸಮಾವೇಶದಲ್ಲಿ ಭಾಗಿಯಾದವರ ಮೇಲೆಯೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಗಡಾದ ತಿಳಿಸಿದ್ದಾರೆ.

You might also like
Leave a comment