This is the title of the web page

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ನಿಧನ

ಬೆಂಗಳೂರು, 10- ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು ಸೋಮವಾರ ಬೆಳಿಗ್ಗೆ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಕನ್ನಡದ ಕವಿ, ನಾಟಕಕಾರ, ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಅವರು ‘ಚಂಪಾ’ ಎಂದೇ ಪ್ರಖ್ಯಾತರಾಗಿದ್ದರು. 1939ರಲ್ಲಿ ಅವರು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದ್ದ ಅವರು, ಹತ್ತಿಮತ್ತೂರು- ಹಾವೇರಿ ಶಾಲೆ-ಹೈಸ್ಕೂಲ್ ಮುಗಿಸಿ 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದರು. 1960ರಲ್ಲಿ ಬಿಎ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1962ರಲ್ಲಿ ಎಂ.ಎ. ಮುಗಿಸಿದರು. 1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು.

1980-82ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ ಚಳವಳಿಗೆ ಪ್ರೇರಣಿ ನೀಡಿದ್ದ ಪ್ರಮುಖರಲ್ಲಿ ಚಂಪಾ ಒಬ್ಬರಾಗಿದ್ದರು.

ಚಂಪಾ ಅವರು 2004-08ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕ್ರಾಂತಿಕಾರ ಮನೋಭಾವ ಹೊಂದಿದ್ದ ಚಂಪಾ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯವ್ಯಾಪಿ ವಿಸ್ತರಿಸುವಲ್ಲಿ ಮತ್ತು ಕನ್ನಡವನ್ನು ಜನರಿಗೆ ತಲುಪಿಸುವಲ್ಲಿ ಕೊಡುಗೆ ನೀಡಿದ್ದಾರೆ.

“ಸಂಕ್ರಮಣ” ಎಂಬ ಪತ್ರಿಕೆಯನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ಪ್ರಕಟಿಸುತ್ತಿದ್ದ ಚಂಪಾ ಅವರು ಹತ್ತಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಚಂಪಾ ಅವರಿಗೆ ಸಂದಿವೆ.

ಸಾಹಿತಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗುರುತಿಸಿಕೊಂಡದ್ದಕ್ಕಿಂತ ಒಬ್ಬ ಹೋರಾಟಗಾರರಾಗಿ ಹೆಚ್ಚು ಗುರುತಿಸಿಕೊಂಡವರು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದು ಬಹಳ ಸಂಘಟಿತವಾದಂತಹ ಹೋರಾಟ ರೂಪಿಸಿದ್ದರು. ಕೇಂದ್ರ ಪಠ್ಯಕ್ರಮದಲ್ಲಿಯೂ ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದರು.

ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಚಂಪಾ ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದರು ಎಂದು ಚಂಪಾ ಅವರನ್ನು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.

ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿ ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬೊಮ್ಮಾಯಿ ಕೋರಿದ್ದಾರೆ.

You might also like
Leave a comment