This is the title of the web page

ಸ್ವಾತಂತ್ರ್ಯ ಹೋರಾಟಕ್ಕೆ ಚೆನ್ನಮ್ಮ ಕೊಡುಗೆ ಅಪಾರ -ರಾಜ್ಯಪಾಲ

ಬೆಳಗಾವಿ, ಮಾ. 8- ವೀರ ರಾಣಿ ಚನ್ನಮ್ಮನ ನಾಡಿಗೆ ಭೇಟಿ ನೀಡಿದ್ದು, ನನಗೆ ಬಹಳ ಸಂತೋಷ ತಂದಿದೆ. 18 ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ರಾಣಿ ಚನ್ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದರು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕದ ರಾಜ್ಯಪಾಲ ಥಾವರ ಚಂದ ಗೆಹ್ಲೋಟ ಹೇಳಿದರು.

ಚೆನ್ನಮ್ಮನ ಕಿತ್ತೂರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಣಿ ಚನ್ನಮ್ಮ ಇತಿಹಾಸವನ್ನು ಕೇಳಿದ್ದೇನೆ. ರಾಣಿ ಚನ್ನಮ್ಮಳ ನಾಡಿಗೆ ಭೇಟಿ ನೀಡುವ ಇಚ್ಛೆಯನ್ನು ಹೊಂದಿದ್ದೆ. ನಾನು ಕರ್ನಾಟಕ ರಾಜ್ಯದ ರಾಜ್ಯಪಾಲನಾದ ನಂತರ ಈ ಸುವರ್ಣ ಅವಕಾಶ ನನಗೆ ಲಭಿಸಿರುವುದರಿಂದ ಮತ್ತಷ್ಟು ಸಂತಸವಾಗಿದೆ ಎಂದು ತಿಳಿಸಿದರು.

ಅಂತರಾಷ್ಟ್ರೀಯ ಮಹಿಳಾ ದಿನದಂದು ಈ ಸ್ಥಳಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯವಾಗಿದೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿಳೆಯರು ಹೋರಾಡಿದ್ದಾರೆ; ಅದರಲ್ಲಿ ರಾಣಿ ಚನ್ನಮ್ಮ ಅವರು ಒಬ್ಬರು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದಂತಹ ಸಂಘರ್ಷದಿಂದ ಸ್ವಾತಂತ್ರ್ಯ ದೊರೆತಿದೆ. ಅದಕ್ಕಾಗಿ ಅವರಿಗೆ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಗೆಹ್ಲೋಟ್ ತಿಳಿಸಿದರು.

ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ಮತ್ತಿತರ ಗಣ್ಯರು ರಾಜ್ಯಪಾಲರನ್ನು ಸನ್ಮಾನಿಸಿ, ಗೌರವಿಸಿದರು.

ಪಟ್ಟಣದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರಾಜ್ಯಪಾಲರು, ಕೋಟೆಯನ್ನು ವೀಕ್ಷಿಸಿದರು.

You might also like
Leave a comment