This is the title of the web page

ಮುಖ್ಯಮಂತ್ರಿಗಳು ಕೆಲ ಸಂಘಟನೆಗಳ ಕೈಗೊಂಬೆ -ಕುಮಾರಸ್ವಾಮಿ

 

ಬೆಂಗಳೂರು, ಮಾ.29- ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹರಡುತ್ತಿರುವ ಕಿಡಿಗೇಡಿಗಳ ಮೇಲೆ ಮುಲಾಜಿಲ್ಲದೇ ಕಡಿವಾಣ ಹಾಕಬೇಕು. ಈ ವಿಷಯದಲ್ಲಿ ಸರಕಾರ ಸುಮ್ಮನಿರಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ಸಂಘಟನೆಗಳ ಕೈಗೊಂಬೆ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ವಿಧಾನಸೌಧ ಬಳಿ ಮಂಗಳವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ ಮುಖ್ಯಮಂತ್ರಿಗಳು ಕೆಲ ಸಂಘಟನೆಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಒಂದು ಸಮುದಾಯಕ್ಕೆ ಮೀಸಲಲ್ಲ. ಆರೂವರೆ ಕೋಟಿ ಕನ್ನಡಿಗರಿಗೆ ಸೇರಿದವರು. ಎಲ್ಲರ ರಕ್ಷಣೆ ಸರಕಾರದ ಹೊಣೆ. ಕೇವಲ ಒಂದು ಸಮುದಾಯವನ್ನು ರಕ್ಷಿಸುತ್ತ ಸರಕಾರ ನಡೆಸಲು ಆಗದು. ಇದನ್ನು ಕನ್ನಡಿಗರು ಸಹಿಸುವುದಿಲ್ಲ. ಅಂಥವರನ್ನು ಕಿತ್ತೆಸೆಯುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ನಾನು ವಾಟ್ಸಪ್ ನಲ್ಲಿ ಬಂದ ಸಂದೇಶಗಳನ್ನು ಗಮನಿಸಿದೆ. ಇಂಥ ಕಿಡಿಗೇಡಿ ಸಂದೇಶಗಳನ್ನು ಯಾರು ಹರಡುತ್ತಿದ್ದಾರೆ? ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟ ಹಾಕಬೇಕು. ಒಂದು ವೇಳೆ ಶಾಸಕರು, ಸಚಿವರೇ ಇದ್ದರೂ ಅವರನ್ನು ಬಂಧಿಸಬೇಕು ಹಾಗೂ ಅವರಿಗೆ ಜನರೇ ಬಹಿಷ್ಕಾರ ಹಾಕಬೇಕು ಆಗ್ರಹಪಡಿಸಿದರು.

ಮುಸ್ಲಿಂ ಸಮುದಾಯದ ವ್ಯಾಪಾರಗಳಿಗೆ ನಿಷೇಧ ಹೇರಬೇಕು ಎನ್ನುವ ಸಂದೇಶದಲ್ಲಿ ಹಣ್ಣಿನ ವ್ಯಾಪಾರ, ಹೋಟೆಲ್ , ಹಾರ್ಡ್ ವೇರ್, ಟ್ರಾವೆಲ್, ಕಿರಾಣಿ ಅಂಗಡಿಗಳಿಗೆ ಹೋಗಬೇಡಿ. ಟ್ರಾವಲ್ ಬುಕಿಂಗ್, ಕಿರಾಣಿ ಅಂಗಡಿ, ಮುಸ್ಲಿಂ ವೈದ್ಯರ ಬಳಿ‌ ಹೋಗಬೇಡಿ ಎಂದು ಜನರ ತಲೆ ಕೆಡಿಸುವ ಕೆಲಸ ಆಗುತ್ತಿದೆ. ಹಿಂದೂಗಳ ಅಂಗಡಿಗಳಿಗೆ ಮಾತ್ರ ಹೋಗಿ ಅಂತ ಸಂದೇಶ ಹರಡುತ್ತಿದ್ದಾರೆ .‌ ಇವರು ನಮ್ಮ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ? ಸರ್ವ ಜನಾಂಗದ ತೋಟವನ್ನು ಸರ್ವನಾಶ ಮಾಡುತ್ತಿದ್ದಾರೆ. ಇಂತವರನ್ನು ಸುಮ್ಮನೆ ಬಿಡಬಾರದು. ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದರೆ ಅರ್ಥವೇನು? ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲಿಕ್ಕೆ ಜೆಡಿಎಸ್ ಆಗಲಿ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ನೇರ ಕಾರಣ. ಅವರಿಂದಲೇ ಇಂಥ ಸರಕಾರ ಬಂದಿತು ಎಂದು ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದರು.

ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿಯವರು ಕಾರಣ. ಈ ಕಾರಣಕ್ಕೆ ನಾನು ಹಿಂದೂ ಸಮುದಾಯದ ಯುವಕರಿಗೆ ಕೈ ಮುಗಿದು ಹೇಳುತ್ತೇನೆ, ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ. ರಾಜಕೀಯಕ್ಕಾಗಿ ಮನಸ್ಸುಗಳನ್ನು ಕೆಡಿಸುವ ಕಿಡಿಗೇಡಿಗಳ ಮಾತು ಕೇಳಬೇಡಿ. ಯಾರು ಕೂಡ ಇಲ್ಲಿ ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ, ಇದನ್ನು ಹಾಳು ಮಾಡಬೇಡಿ ಎಂದು ಅವರು ಮನವಿ ಮಾಡಿದರು.

ಈ ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯಾ? ಏನು ಮಾಡುತ್ತಿದೆ ಸರ್ಕಾರ? ಮುಖ್ಯಮಂತ್ರಿ ವಿರುದ್ಧ ಮಾತಾಡಿದ್ದಕ್ಕೆ ಬಂಧನ ಮಾಡಿದ್ದಾರೆ. ಇಂಥ ವಿಚಾರಗಳ ಬಗ್ಗೆ ಪ್ರಚೋದನೆ ಮಾಡುವವರನ್ನು ಕೂಡ ಬಂಧಿಸಿರಿ. ಈ ರೀತಿ ಪ್ರಚೋದನೆ ಮಾಡಿದರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಬಂಧಿಸಿ ಎಂದು ಅವರು ಆಗ್ರಹಿಸಿದರು.

ಸಮಾಜವನ್ನು ಒಡೆಯುವ ಇವರು ದೇಶ ಉಳಿಸುವವರಲ್ಲ. ನಾನು ಯುವಕರಿಗೆ ಹೇಳುತ್ತೇನೆ, ಯುವಕರು ಇದಕ್ಕೆ ಬಲಿಯಾಗಬಾರದು. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ. ಹಿಂದೂ ಯುವಕರಿಗೆ ಕೈ ಮುಗಿದು ಹೇಳುತ್ತೇನೆ. ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಬೇಡಿಕೊಂಡರು.

ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಾಗುತ್ತಾರೆ. ಕರ್ನಾಟಕ ರಾಜ್ಯ ಶಾಂತಿಯ ತೋಟ, ಹಾಳು ಮಾಡಬೇಡಿ. ಅಂಥ ವ್ಯಕ್ತಿಗಳನ್ನು ಕರ್ನಾಟಕದ ಜನರು ಬಹಿಷ್ಕಾರ ಮಾಡಬೇಕು. ಸಮಾಜದಿಂದ ಹೊರ ಹಾಕಬೇಕು. ಇಲ್ಲದಿದ್ದರೆ ಮುಂದೆ ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಇಂಥ ಕೃತ್ಯಗಳು ನಡೆಯುತ್ತಿದ್ದರೆ ಸದನದಲ್ಲಿ ಸಭಾಧ್ಯಕ್ಷರು ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ ಇಟ್ಟುಕೊಂಡಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಚರ್ಚೆ? ನನಗೆ ಈ ಕಲಾಪದಲ್ಲಿ ಭಾಗಿಯಾಗುವ ಉದ್ದೇಶ ಇರಲಿಲ್ಲ. ಆದರೆ ಇಂಥ ಸಮಾಜಘಾತುಕ ಸಂದೇಶಗಳ ಬಗ್ಗೆ, ಇವುಗಳ ಹಿಂದೆ ಇರುವವರನ್ನು ಹೊರಗೆ ಎಳೆಯಬೇಕು ಎನ್ನುವ ಬಗ್ಗೆ ಮಾತನಾಡಲು ಕಲಾಪಕ್ಕೆ ಬಂದೆ. ಸದನದಲ್ಲಿ ಇಂಥ ವಿಚಾರ ಚರ್ಚೆ ಆಗಬೇಕು ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ಉತ್ತರ ಭಾರತದಲ್ಲಿ ಮತಕ್ಕಾಗಿ ಮಾಡಿದ್ದನ್ನೇ ಇಲ್ಲಿಯೂ ಮಾಡಲು ಹೊರಟಿದ್ದಾರೆ. ಉತ್ತರವೇ ಬೇರೆ, ದಕ್ಷಿಣವೇ ಬೇರೆ. ನಮ್ಮ ರಾಜ್ಯ ನೆಮ್ಮದಿಯ ನಾಡು. ಆದರೂ ಅಶಾಂತಿಯನ್ನು ಹುಟ್ಟು ಹಾಕುವ ಕೃತ್ಯ ನಡೆಯುತ್ತಿದೆ. ಇದು ಖಂಡಿತಾ ಸರಿಯಲ್ಲ ಎಂದು ಅವರು ಒತ್ತಿ ಹೇಳಿದರು.

ನಮ್ಮ ಸಮಾಜವನ್ನು ವಿಘಟನೆ ಮಾಡುತ್ತಿರುವವರು ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ? ದೇವಸ್ಥಾನ ಕಟ್ಟುವರು ಓಬಿಸಿ , ದಲಿತರು. ಆದರೆ ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ಇಂಥ ವಿದ್ರೋಹದ ಕೆಲಸ ಮಾಡುವವರು. ನಾನೆಂದೂ ಇಷ್ಟು ಕಠಿಣವಾಗಿ ಮಾತಾಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

You might also like
Leave a comment