This is the title of the web page

ಪಾಲಕರು ಲಸಿಕೆ ಪಡೆದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ

ಬೆಂಗಳೂರು, 3- ಕರ್ನಾಟಕದಲ್ಲಿ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯ ಬಳಿಕ ನೂತನ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್​ಅಶೋಕ, ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ ನೀಡಲಾಗುವುದು ಎಂದು ಪ್ರಕಟಿಸಿದರು.

ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಮಟ್ಟದ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಮತ್ತು ಮಕ್ಕಳ ಪೋಷಕರಿಗೆ 2 ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಚಿತ್ರಮಂದಿರ, ಮಾಲ್‌ಗಳ ಪ್ರವೇಶಕ್ಕೆ 2 ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.

ಶಾಲಾ-ಕಾಲೇಜುಗಳಲ್ಲಿ ಸಮಾರಂಭಕ್ಕೆ ಅವಕಾಶವಿಲ್ಲ. ಸಿನೆಮಾ ಹಾಲ್, ಮಾಲ್‌ನಲ್ಲಿ, ಶಾಲೆಗಳಲ್ಲಿ ಕೆಲಸ ಮಾಡುವವರು ಮತ್ತು ಮಕ್ಕಳ ಪೋಷಕರು 2 ಡೋಸ್ ಕಡ್ಡಾಯವಾಗಿ ಪಡೆದಿರಬೇಕು. ಮದುವೆಗಳಲ್ಲಿ 500ರೊಳಗೆ ಮಾತ್ರ ಜನ ಸೇರಬೇಕು.

ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೋವಿಡ್ ಬೆಡ್, ಐಸಿಯು ಬೆಡ್‌ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲಾಗುವುದು. ಅದಕ್ಕೆ ಬೇಕಾದ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಔಷಧಿಗಳನ್ನು ಮುಂಚಿತವಾಗಿಯೇ ಖರೀದಿಸುವಂತೆ ಸೂಚಿಸಲಾಗಿದೆ ಎಂದರು.

ಪ್ರತಿನಿತ್ಯ 1 ಲಕ್ಷ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್​ ಉಸ್ತುವಾರಿಗಾಗಿ ಶಿಲ್ಪಾ ನಾಗರಾಜ ಅವರನ್ನು ಸರ್ವೆಲೈನ್ಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೊವಿಡ್ ಟೆಸ್ಟ್‌ಗೆ 500 ರೂ. ದರ ನಿಗದಿ ಮಾಡಲಾಗಿದೆ. ಅಬೇಟ್‌ ಟೆಸ್ಟ್​ಗೆ ₹ 3,000 ನಿಗದಿ ಮಾಡಲಾಗಿದೆ. ಏರ್‌ಪೋರ್ಟ್‌ನಲ್ಲಿಯೂ ಕಟ್ಟುನಿಟ್ಟಾಗಿ ಕೋವಿಡ್ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ನಂತರ ಏರ್‌ಪೋರ್ಟ್‌ನಿಂದ ಹೊರಕ್ಕೆ ಕಳಿಸಲಾಗುವುದು ಎಂದರು.

ಬೆಳಗಾವಿ ಸುವರ್ಣಸೌಧದಲ್ಲಿಯೇ ಅಧಿವೇಶನ ನಡೆಯುತ್ತದೆ. ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಿನ ನಿಯಮಗಳ ನಡುವೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಸಚಿವರಾದ ಡಾ.ಕೆ.ಸುಧಾಕರ, ಆರ್‌. ಅಶೋಕ, ಗೋವಿಂದ ಕಾರಜೋಳ, ಡಾ.ಅಶ್ವತ್ಥ್ ನಾರಾಯಣ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ. ಮಂಜುನಾಥ ಪ್ರಸಾದ್, ತಜ್ಞ ವೈದ್ಯರಾದ ಡಾ.ಎಂ.ಕೆ.ಸುದರ್ಶನ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

You might also like
Leave a comment