This is the title of the web page

17ರಂದು ಕ್ರೈಸ್ತರ ಪ್ರತಿಭಟನೆ

ಬೆಳಗಾವಿ, 12- ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸರ್ಕಾರ ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ “ಮತಾಂತರ ನಿಷೇಧ ಕಾಯ್ದೆ” ಜಾರಿ ಮಾಡದಂತೆ ಸರಕಾರದ ಮೇಲೆ ಒತ್ತಾಯ ಹೇರಲು ಕ್ರೈಸ್ತ ಸಮುದಾಯ ಮುಂದಾಗಿದೆ.

ಭಾರತೀಯ ಕ್ರೈಸ್ತ ಒಕ್ಕೂಟದ ವತಿಯಿಂದ ಡಿ.17ರಂದು ಮತಾಂತರ ನಿಷೇಧ ಕಾನೂನನ್ನು ಜಾರಿ ಮಾಡದಂತೆ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಪ್ರತಿಭಟನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಬೆಳಗಾವಿ ಅಧಿವೇಶನದ ವೇಳೆ ಮಸೂದೆ ಮಂಡನೆಗೆ ರಾಜ್ಯ ಸರಕಾರ ಮುಂದಾಗಿದೆ ಎನ್ನುವ ವಿಚಾರಗಳು ಹರಿದಾಡುತ್ತಿವೆ.
ಅಖಿಲ ಭಾರತ ಕೃಸ್ತ ಒಕ್ಕೂಟದ ಕಾನೂನು ಸಲಹೆಗಾರ ಎಮ್. ರಮೇಶ ಈ ಬಗ್ಗೆ ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿ ಭಾರತೀಯ ಕ್ರೈಸ್ತ ಒಕ್ಕೂಟದ ವತಿಯಿಂದ ಪ್ರಶಾಂತ ಜತ್ತಣ್ಣರವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮತಾಂತರ ನಿಷೇಧ ಕಾಯ್ದೆ ಜಾರಿ ತರಬಾರದು. ನಾವು ಬಡವರು ಹಾಗೂ ನಿರ್ಗತಿಕರನ್ನು ಮತಾಂತರ ಮಾಡುತ್ತೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಂವಿಧಾನ ಬದ್ಧವಾಗಿಯೇ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಹುನ್ನಾರ ಈ ಕಾಯ್ದೆಯನ್ನು ಜಾರಿಗೊಳಿಸುವದರ ಹಿಂದಿದೆ ಎಂದರು.

ಈ ಕಾಯ್ದೆಯನ್ನು ಜಾರಿಗೊಳಿಸಿದರೆ ಉಗ್ರ ಹೋರಾಟವನ್ನು ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

You might also like
Leave a comment