This is the title of the web page

ಗುಜರಾತ ನರಮೇಧ; ಪ್ರಧಾನಿ ಮೋದಿಗೆ ಕ್ಲೀನ ಚಿಟ್ ನೀಡಿದ ಸುಪ್ರೀಮ ಕೋರ್ಟ

ಹೊಸದಿಲ್ಲಿ, ೨೪- ಸಾವಿರಾರು ಅಲ್ಪಸಂಖ್ಯಾತರ ನರಮೇಧ ನಡೆದ 2002 ರ ಗುಜರಾತ್‌ ಹತ್ಯಾಕಾಂಡದ ಪ್ರಕರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದ ಸರ್ವೋಚ್ಛ ನ್ಯಾಯಾಲಯ ಇಂದು ಕ್ಲೀನ‌ ಚಿಟ್‌ ನೀಡಿದೆ.

ಗಲಭೆಯಲ್ಲಿ ಮೋದಿ ಅವರ ಪಾತ್ರ ಇಲ್ಲ ಎನ್ನುವ ಎಸ್‌ಐಟಿಯ ಈ ಹಿಂದೆ ತೀರ್ಪನ್ನು ಸುಪ್ರೀಮ ಕೋರ್ಟ್ ಎತ್ತಿ ಹಿಡಿದಿದ್ದು ಈ ಬಗ್ಗೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ತಳ್ಳಿ ಹಾಕಿದೆ.

2002ರ ಗಲಭೆ ವೇಳೆ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಈ ಗಲಭೆಯಲ್ಲಿ ಖುದ್ದು ಮೋದಿಯವರ ಕೈವಾಡ ಇದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಸತತ ಮೂರು ದಿನ ಅಲ್ಪಸಂಖ್ಯಾತರ ಮಾರಣಹೋಮ ನಡೆದರೂ ಆಡಳಿತ ವ್ಯವಸ್ಥೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ದೂರಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ದಳ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಧಾನಿ ಮೋದಿ ಮೇಲಿನ ಆರೋಪವನ್ನು ತಳ್ಳಿ ಹಾಕಿತ್ತು.

ಎಸ್‌ಐಟಿಯ ಈ ನಿರ್ಧಾರವನ್ನು ಪ್ರಶ್ನೆ ಮಾಡಿ ಸುಪ್ರೀಮ ಕೋರ್ಟ ಮೊರೆ ಹೋಗಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಮ ಕೋರ್ಟ ಸಹ ಈಗ ಎಸ್‌ಐಟಿಯ ನಿರ್ಧಾರವನ್ನು ಎತ್ತಿ ಹಿಡಿದಿದೆ. ಆ ಮೂಲಕ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಪಾತ್ರ ಇಲ್ಲ ಎಂದು ಹೇಳಿ ಮೇಲ್ಮನವಿಯನ್ನು ತಳ್ಳಿ ಹಾಕಿದೆ.

ಗೋಧ್ರಾ ಘಟನೆಯ ನಂತರ ಗುಜರಾತ ಗಲಭೆಯಲ್ಲಿ ನರೇಂದ್ರ ಮೋದಿ ಅವರ ಮೇಲೆ ಕೇಳಿ ಬಂದ ಆರೋಪದ ತನಿಖೆಗೆ ಸುಪ್ರೀಮ ಕೋರ್ಟ್‌ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ಸುದೀರ್ಘ ತನಿಖೆ ನಡೆಸಿದ ಎಸ್‌ಐಟಿ ಈ ಪ್ರಕರಣದಲ್ಲಿ ನರೇಂದ್ರ ಮೋದಿ ಹಾಗೂ ಆರೋಪಿ ಸ್ಥಾನದಲ್ಲಿ ಇರುವ ಇನ್ನಿತರ 63 ಮಂದಿಯ ಮೇಲೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಅವರನ್ನು ಖುಲಾಸೆಗೊಳಿಸಿತ್ತು.

ಎಸ್‌ಐಟಿಯ ಈ ತನಿಖಾ ವರದಿಯನ್ನು ಪ್ರಶ್ನಿಸಿ, ಪ್ರಕರಣದಲ್ಲಿ ಪೊಲೀಸ್‌ ಹಾಗೂ ರಾಜಕಾರಣಿಗಳ ಕುತಂತ್ರದ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕು ಎಂದು ಕೋರಿ ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್‌ ಸಂಸದ ಎಹಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಸುಪ್ರೀಮ ಕೋರ್ಟ ಮೊರೆ ಹೋಗಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಗು ಎಸ್‌ಐಟಿ ಪರ ಮುಕುಲ್‌ ರೋಹಟ್ಗಿ ವಾದ ಮಂಡಿಸಿದರು.

ವಾದ ವಿವದಗಳನ್ನು ಆಲಿಸಿದ ಸುಪ್ರೀ ಕೋರ್ಟ್‌, ಮೋದಿ ಅವರನ್ನು ಖುಲಾಸೆಗೊಳಿಸಿದ ಎಸ್‌ಐಟಿಯ ತನಿಖಾ ವರದಿಯನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಎಂಎಂ ಖಾನ್ವಿಲ್ಕರ‌, ನ್ಯಾ. ದಿನೇಶ‌ ಮಹೇಶ್ವರಿ ಹಾಗೂ ಸಿಟಿ ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ಎಸ್‌ಐಟಿ ವರದಿಯನ್ನು ಎತ್ತಿ ಹಿಡಿದು ತೀರ್ಪು ಪ್ರಕಟಿಸಿದೆ. ಈಗ ಗುಜರಾತ ನರಮೇಧದಲ್ಲಿ ಪ್ರಧಾನಿ ಮೋದಿ ಅವರು ದೋಷಮುಕ್ತರಾಗಿದ್ದಾರೆ.

ಗುಜರಾತ‌ ಹತ್ಯಾಕಾಂಡದ ಪ್ರಕರಣದ ತನಿಖೆ ನಡೆಸಲು ಸುಪ್ರೀಮ ಕೋರ್ಟ 2011ರಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ತನಿಖೆ ನಡೆಸಿದ ಎಸ್‌ಐಟಿ, 2012ರಲ್ಲಿ ಸುಪ್ರೀಮ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಪ್ರಕರಣದಲ್ಲಿ ನರೇಂದ್ರ ಮೋದಿ ಹಾಗೂ ಇನ್ನಿತರ 64 ಮಂದಿಯ ಪಾತ್ರ ಇರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ವರದಿಯಲ್ಲಿ ಹೇಳಿತ್ತು. ಇದೀಗ ಅದನ್ನೇ ಸುಪ್ರೀಮ ಕೋರ್ಟ ಎತ್ತಿ ಹಿಡಿದಿದೆ.

You might also like
Leave a comment