ಗೋಕಾಕ : “ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿರುವ ಕರ್ನಲ್ ಸೋಫಿಯಾ ಖುರೇಶಿ ಅವರ ಮಾವನ ಮನೆಯನ್ನು ಆರ್ ಎಸ್ ಎಸ್ ಮತ್ತು ಹಿಂದುಗಳು ಧ್ವಂಸ ಮಾಡಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ಅನೀಸ ಹುದ್ದಿನ ಎಂಬಾತ ಕೆನಡಾದ ವ್ಯಕ್ತಿ ಎಂದು ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹೇಳಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಪೋಸ್ಟನ್ನು ಸಾಮಾಜಿಕ ಜಾಲತಾಣ ಎಕ್ಸ ಖಾತೆಯಲ್ಲಿ ಹಂಚಿಕೊಂಡಿದ್ದು ಜಿಲ್ಲಾ ಸಾಮಾಜಿಕ ತಾಣ ನಿಯಂತ್ರಣ ಅಧಿಕಾರಿಗಳು ಅದಕ್ಕೆ ಪ್ರತಿಯಾಗಿ ಉತ್ತರ ಕೊಟ್ಟಾಗ ಆತ ಪೋಸ್ಟ್ ಡಿಲಿಟ್ ಮಾಡಿದ್ದಾನೆ ಎಂದರು.
ಕೆನಡಾದಿಂದ ಆತ ಪೋಸ್ಟ ಮಾಡಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ. ನಾವು ಇದು ಸುಳ್ಳು ಎಂದು ಹೇಳಿದಾಗ ಆತ ಪೋಸ್ಟ ಡಿಲಿಟ್ ಮಾಡಿದ್ದಾನೆ. ಈತನ ಬಗ್ಗೆ ಎಕ್ಸ್ ಖಾತೆಯ ಬಗ್ಗೆ ಎಕ್ಸ ಖಾತೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಒಂದು ವೇಳೆ ಆತ ಭಾರತೀಯನಾಗಿದ್ದರೆ ಆತನ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಸೋಫಿಯಾ ಖುರೇಶಿ ಅವರು ಸೇನೆಯಲ್ಲಿರುವುದರಿಂದ ಅವರಿಗೆ ಸೂಕ್ಷ್ಮತೆಯ ಬಗ್ಗೆ ಅರಿವು ಇದೆ. ಆದರೂ ಅವರ ಮನೆಯ ಸುತ್ತಮುತ್ತ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ಗುಳೇದ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ, ಸಮುದಾಯದ ನಡುವೆ ವಿಷ ಬೀಜ ಬಿತ್ತುವ ಕಿಡಿಗೇಡಿಗಳ ಮೇಲೆ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ಹದ್ದಿನ ಕಣ್ಣಿಟ್ಟಿದೆ. ಪೋಸ್ಟ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಎಚ್ಚರಿಸಿದರು.