This is the title of the web page

ಮಹಿಳೆಯರ ಕೈ ಹಿಂದೆ ಕಟ್ಟಿ ಕೋಳ ಹಾಕಿದ ಪೊಲೀಸರು

ಪಾಟ್ನಾ (ಬಿಹಾರ), 18- ಬಿಹಾರದ ಗಯಾ ಜಿಲ್ಲೆಯಲ್ಲಿ ಬಂಧಿಸಿದ ನಂತರ ಹಲವು ಮಹಿಳೆಯರಿಗೆ ಕೈ ಹಿಂದೆ ಕಟ್ಟಿ ಕೈಕೋಳ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರ ಹೇಳಿಕೆ ಪ್ರಕಾರ ಬುಧವಾರ ಗಯಾ ಜಿಲ್ಲೆಯ ಬೆಳಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣಿಗಾರಿಕೆ ಪ್ರದೇಶ ಗುರುತಿಸುವ ಸಂದರ್ಭದಲ್ಲಿ ಗ್ರಾಮಸ್ಥ ಮಹಿಳೆಯರು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ.

ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಕೆಲವು ಮಹಿಳೆಯರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದು ಗಯಾ ನಗರ ಎಸ್ ಪಿ ರಾಕೇಶ ಕುಮಾರ ತಿಳಿಸಿದ್ದಾರೆ.

ಅಧತ್‌ಪುರ ಗ್ರಾಮದ ಬಳಿ ಗಣಿಗಾರಿಕೆ ಘಾಟ್‌ಗಳ ಪ್ರದೇಶವನ್ನು ಗುರುತಿಸುವ ಆಡಳಿತದ ಉಪಕ್ರಮದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಅವರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ತಂಡದ ಮೇಲೆ ದಾಳಿ ಮಾಡಿದರು, ಹನ್ನೆರಡು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಮಳೆಗಾಲದಲ್ಲಿ ನದಿಯ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಮರಳು ಘಾಟಿಯಲ್ಲಿ ಗಣಿಗಾರಿಕೆಗೆ  ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ ಎಂದೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಗಣಿ ಘಾಟ್‌ಗಳ ಗಡಿ ಗುರುತಿಸಲು ಗಣಿ ಇಲಾಖೆ ಇತ್ತೀಚೆಗೆ ಪತ್ರ ನೀಡಿದ್ದು, ಜಿಲ್ಲಾಧಿಕಾರಿಯೊಂದಿಗೆ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ನಗರ ಎಸ್‌ಪಿ ಹೇಳಿದರು. ತಂಡದೊಂದಿಗೆ ಮಹಿಳಾ ಪೇದೆಗಳೂ ಜೊತೆಗಿದ್ದರು. ಆದರೆ, ಮಹಿಳೆಯರ ಕೈಕೋಳ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

You might also like
Leave a comment