This is the title of the web page

ಮಹಾರಾಷ್ಟ್ರದಲ್ಲಿ ಕೊರೋನಾ ವಿಸ್ಫೋಟ; ಒಂದೇ ದಿನ 18,000 ಜನರಲ್ಲಿ ಸೋಂಕು, 20 ಸಾವು

ಮುಂಬಯಿ, 4- ಮೊದಲೆರಡು ಅಲೆಗಳಲ್ಲಿ ಅತೀ ಹೆಚ್ಚಿನ ಕೊರೊನಾ ಸೋಂಕಿನ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಮುಖ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರ ಮೂರನೇ ಅಲೆಯಲ್ಲೂ ಅಪಾಯಕಾರಿ ಎನ್ನುವಂತೆ ಮುಂಚೂಣಿಯಲ್ಲಿದೆ.

ರಾಜ್ಯದ ರಾಜಧಾನಿ ಮುಂಬಯಿ ಮಹಾನಗರಿಯಲ್ಲಿ ಮಂಗಳವಾರ 10,860 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಒಂದೇ ಸಮನೆ ಏರಿಕೆ ಕಂಡಿದೆ. ಸೋಮವಾರ (8,082)ಕ್ಕೆ ಹೋಲಿಸಿದರೆ ಹೊಸ ಕೇಸ್‌ಗಳ ಸಂಖ್ಯೆ ಶೇ. 34ರಷ್ಟು ಏರಿಕೆಯಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ಮಂಗಳವಾರ 18,466 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಮವಾರಕ್ಕಿಂತ ಶೇ. 51ರಷ್ಟು ಏರಿಕೆಯಾಗಿವೆ. ಸೋಮವಾರ ರಾಜ್ಯದಲ್ಲಿ 12,160 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಇದೇ ವೇಳೆ 20 ಮಂದಿ ಸಾವಿಗೀಡಾಗಿದ್ದಾರೆ.

ಮುಂಬೈನ ಹೊಸ ಪ್ರಕರಣಗಳಲ್ಲಿ ಶೇ. 89ರಷ್ಟು ರೋಗಿಗಳು 9,665 ರೋಗಿಗಳಲ್ಲಿ ಯಾವುದೇ ಕೊರೊನಾ ಲಕ್ಷಣಗಳಿಲ್ಲ. ವರದಿಯಾದ ಒಟ್ಟು ಪ್ರಕರಣಗಳಲ್ಲಿ 834 ಸೋಂಕಿತರಿಗೆ ಆಸ್ಪತ್ರೆಗೆ ದಾಖಲು ಅಗತ್ಯವಾಗಿದ್ದು, ಇವರಲ್ಲಿ 52 ಸೋಂಕಿತರಿಗೆ ಕೃತಕ ಆಕ್ಸಿಜನ್‌ ನೀಡುವ ಅಗತ್ಯ ಇದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್‌ ಮುಂಬಯಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈಗಿನ ಕೋವಿಡ್‌ – 19 ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ದೇಶದಲ್ಲಿ 1,900ಕ್ಕೂ ಹೆಚ್ಚು ಓಮಿಕ್ರಾನ್‌ ಕೇಸ್‌ಗಳು ಪತ್ತೆಯಾಗಿದ್ದು, ಇವುಗಳಲ್ಲಿ 500ಕ್ಕೂ ಹೆಚ್ಚು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ದಾಖಲಾಗಿವೆ.

You might also like
Leave a comment