This is the title of the web page

ಈಶ್ವರಪ್ಪ ವಿರುದ್ಧದ ದೇಶದ್ರೋಹ ಆರೋಪದ ತನಿಖೆ ನಡೆಸಲು ಕೋರ್ಟ ಆದೇಶ

ಬೆಂಗಳೂರು 31- ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಕೋಮು ವೈಷಮ್ಯದ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇರೆಗೆ ಕರ್ನಾಟಕದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆ ನಡೆಸುವ  ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ ಜೆ. ಅವರು ಮೇ 5 ರೊಳಗೆ ದೇಶದ್ರೋಹ ಆರೋಪದ ತನಿಖೆ ನಡೆಸಿ ವರದಿ ಸಲ್ಲಿಸಲು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಹಾಗಾಗಿ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಇದೀಗ ಎಫ್‌ಐಆರ್ ಮತ್ತು ತನಿಖೆ ಎದುರಿಸಲೇಬೇಕಾಗಿದೆ.

ಅದರಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್‌ ಎನ್‌ ಚನ್ನಬಸಪ್ಪ ವಿರುದ್ಧವೂ ಕೋಮುದ್ವೇಷ ಕೆರಳಿಸುವಂತಹ ಹೇಳಿಕೆ ದೂರು ದಾಖಲಾಗಿದ್ದು, ಅವರ ವಿರುದ್ಧವೂ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ.

ಶಿವಮೊಗ್ಗದಲ್ಲಿ ಕಳೆದ ತಿಂಗಳ 20ರಂದು ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಈ ಸಂಬಂಧ ಪ್ರಚೋದನಕಾರಿ, ಸಾರ್ವಜನಿಕ ಹೇಳಿಕೆ ನೀಡಿ ಹಿಂದೂ–ಮುಸ್ಲಿಂ ಸಮುದಾಯದ ನಡುವೆ ವೈರತ್ವ ಉಂಟಾಗುವಂತೆ ಮಾಡಿದ್ದಾರೆ’ ಎಂದು ಶಿವಮೊಗ್ಗದ “ಶಾಂತಿ ಸಂಘಟನೆ”ಯ ಮುಖಂಡ ರಿಯಾಜ‌ ಅಹ್ಮದ‌ ಪರ ವಕೀಲರು ಆರೋಪಿಗಳಾದ ಈಶ್ವರಪ್ಪ ಮತ್ತು ಚೆನ್ನಬಸಪ್ಪ ಅವರ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 124(ಎ), 153(ಎ), 153(ಬಿ), 295(ಎ), 295(ಬಿ), 505(2) ಮತ್ತು 504 ಜೊತೆಗೆ ಸೆಕ್ಷನ್‌ 34ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ದೊಡ್ಡಪೇಟೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

ಫೆಬ್ರವರಿ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಹರ್ಷ ಕೊಲೆಯಾಗಿತ್ತು. ಮರುದಿನವೇ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಮುಸ್ಲಿಂ ಗೂಂಡಾಗಳೇ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ‌ ರಾಜ‌ ಸಚಿವ ಕೆ ಎಸ್‌ ಈಶ್ವರಪ್ಪ ಬಹಿರಂಗವಾಗಿ ಆರೋಪಿಸಿದ್ದರು.

ಮುಸಲ್ಮಾನ ಗೂಂಡಾಗಳು ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದ್ದು, ಈ ಹಿಂದೆ ಮುಸಲ್ಮಾನರು ಶಿವಮೊಗ್ಗದಲ್ಲಿ ಎಂದೂ ಬಾಲ ಬಿಚ್ಚಿರಲಿಲ್ಲ, ಈಗ ಬಾಲ ಬಿಚ್ಟಿದ್ದಾರೆ, ಹೀಗೆ ಬಿಡಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು.

ಅದರಂತೆ ಚನ್ನಬಸಪ್ಪ ಕೂಡ ”ಪೊಲೀಸರ ಹೆಣ ಬೀಳಬೇಕು. ಪ್ರತಿ ಸಲವೂ ಅವರನ್ನು ಕಳಕೋ, ಇವರನ್ನು ಕಳಕೋ ಎಂಬಂತಾಗಿದೆ. ನಾವು ಯಾವತ್ತೂ ಹಿಂದೂಗಳನ್ನೇ ಕಳೆದುಕೊಂಡಿರುವುದು. ಪೊಲೀಸ್‌ ನಾಮರ್ದ ಇಲಾಖೆ. ಇಲ್ಲಿ ಆರಕ್ಷಕ ಇಲಾಖೆಯ ವೈಫಲ್ಯ, ದೌರ್ಬಲ್ಯ ಇದೆ. ಆರಕ್ಷಕರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದ್ದರು.

ಉಭಯ ನಾಯಕರ ಪ್ರಚೋದನಾಕಾರಿ ಹೇಳಿಕೆಯ ಬೆನ್ನಲ್ಲೇ ಮುಸ್ಲಿಮ‌ ಸಮುದಾಯದವರ ಮನೆ, ಅಂಗಡಿಗಳ, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಆಗ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದರು. ನಿಷೇಧಾಜ್ಞೆ ಜಾರಿಯಿದ್ದರೂ ಸಹ ಇಂತಹ ಘಟನೆ ಸಂಭವಿಸಿತ್ತು. ಜನಪ್ರತಿನಿಧಿಗಳಾಗಿ ಪ್ರಚೋದನಾಕಾರಿಯಾಗಿ ಮಾತನಾಡಿದ ಉಭಯ ನಾಯಕರ ವಿರುದ್ದ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಲೇ ಇಲ್ಲ. ಪೊಲೀಸ್‌ ವರಿಷ್ಠಾಧಿಕಾರಿಯೂ ದೂರಿಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

You might also like
Leave a comment