This is the title of the web page

ಕೋವಿಡ್ ನಿಯಮ ಪಾಲಿಸದ ನಾಯಕರು; ಚುನಾವಣೆ ಮುಂದೂಡಲು ಹೈಕೋರ್ಟ ಸಲಹೆ

ಅಲಹಾಬಾದ, 24- ಕೊರೋನಾ ಹೊಸತಳಿ ಓಮಿಕ್ರಾನ್ ಸೋಂಕು ಮೂರನೇ ಅಲೆಗೆ ಕಾರಣವಾಗುವ ಸಾಧ್ಯತೆಯಿರುವದರಿಂದ 2022ರ ಫೆಬ್ರವರಿಯಲ್ಲಿ ನಡೆಯಬೇಕಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮೂಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ಅಲಹಾಬಾದ ಹೈಕೋರ್ಟ ಆದೇಶ ರೂಪದ ಸಲಹೆ ನೀಡಿದೆ.

ರಾಜ್ಯದಲ್ಲಿ ಚುನಾವಣಾ ಸಭೆಗಳನ್ನು ರದ್ದುಗೊಳಿಸಬೇಕೆಂದು ಪ್ರಧಾನಿ ಮೋದಿಯವರಿಗೂ ಮನವಿ ಮಾಡಿದೆ.

ಪ್ರಧಾನಿ ಮೋದಿ ಸೇರಿದಂತೆ ವಿವಿಧ ಪಕ್ಷದ ರಾಜಕಾರಣಿಗಳು ಉತ್ತರ ಪ್ರದೇಶದಲ್ಲಿ ಭರ್ಜರಿ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು ಅಲ್ಲಿ ಕೋವಿಡ್ ಪ್ರೊಟೋಕಾಲ್‌ಗಳನ್ನು ಗಾಳಿಗೆ ತೂರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಟ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‌”ರ್ಯಾಲಿಗಳನ್ನು ನಿಲ್ಲಿಸದಿದ್ದರೆ ಮೂರನೇ ಅಲೆಯು ಎರಡನೇ ಅಲೆಗಿಂತ ಕೆಟ್ಟದಾಗಿರುತ್ತದೆ. ಜನರಿದ್ದರೆ ಪ್ರಪಂಚ ಅಲ್ಲವೇ” ಎಂದು ನ್ಯಾಯಾಧೀಶ ಶೇಖರ ಯಾದವ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ಸಭಾಂಗಣದಲ್ಲಿ ನೂರಾರು ಅರ್ಜಿಗಳು ಬರುತ್ತಿದ್ದು, ನೂರಾರು ಜನ ಯಾವುದೇ ದೈಹಿಕ ಅಂತರಗಳನ್ನು ಕಾಯ್ದುಕೊಳ್ಳದೆ ಗಿಜಿಗುಡುವುದನ್ನು ಗಮನಿಸಿದ ನ್ಯಾಯಮೂರ್ತಿಗಳು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಗ್ರಾಮ ಪಂಚಾಯ್ತಿ ಚುನಾವಣೆಗಳು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಕೋವಿಡ್ ವೇಗವಾಗಿ ಹರಡಲು ಕಾರಣವಾಗಿತ್ತು. ಈಗ ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್ ಪ್ರೊಟೋಕಾಲ್‌ಗಳನ್ನು ಅನುಸರಿಸಿ ಚುನಾವಣಾ ರ್ಯಾಲಿಗಳನ್ನು ನಡೆಸುವುದು ಅಸಾಧ್ಯ. ಹಾಗಾಗಿ ರ್ಯಾಲಿಗಳನ್ನೇ ರದ್ದುಗೊಳಿಸಿ ಒಂದೆರೆಡು ತಿಂಗಳು ಚುನಾವಣೆ ಮುಂದೂಡಬೇಕು” ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

“ಚುನಾವಣಾ ಆಯೋಗವು ಕೋರ್ಟ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ದೈಹಿಕ ರ್ಯಾಲಿಗಳನ್ನು ರದ್ದುಗೊಳಿಸಬೇಕು. ರಾಜಕೀಯ ಪಕ್ಷಗಳು ಟಿವಿ ಮತ್ತು ಪತ್ರಿಕೆಗಳ ಮೂಲಕ ಚುನಾವಣಾ ಪ್ರಚಾರ ನಡೆಸಲಿ. ಸಂವಿಧಾನದ ಆರ್ಟಿಕಲ್ 21ರನ್ವಯ ಭಾರತದ ಎಲ್ಲರಿಗೂ ಬದುಕುವ ಹಕ್ಕಿದೆ” ಎಂದು ತಿಳಿಸಿದ್ದಾರೆ.

You might also like
Leave a comment