This is the title of the web page

ಪಟಿಯಾಲಾದಲ್ಲಿ ಗುಂಪು ಘರ್ಷಣೆ; ಕರ್ಫ್ಯು ಜಾರಿ

ಪಟಿಯಾಲಾ, 29- ಪಂಜಾಬ್‌ನ ಪಟಿಯಾಲಾ ನಗರದಲ್ಲಿ ಶುಕ್ರವಾರ ಶಿವಸೇನೆಯು ಖಾಲಿಸ್ತಾನ್ ವಿರೋಧಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಿಂದಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಇಂದು ಸಂಜೆ 7 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ.
ಖಲಿಸ್ತಾನಿ ಗುಂಪುಗಳ ವಿರುದ್ಧ ಇಂದು ಪಂಜಾಬ ಶಿವಸೇನೆ ಕಾರ್ಯಾಧ್ಯಕ್ಷ ಹರೀಶ ಸಿಂಗ್ಲಾ ನೇತೃತ್ವದಲ್ಲಿ ಶಿವಸೇನೆ ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ಮತ್ತು ಕತ್ತಿಗಳು ಝಳಪಿಸಿವೆ. ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ರ್‍ಯಾಲಿಯ ಜನಸಂದಣಿಯಿಂದ ಹಲವಾರು ಜನರು “ಖಾಲಿಸ್ತಾನ ಮುರ್ದಾಬಾದ್” ಘೋಷಣೆಗಳನ್ನು ಎತ್ತಿದಾಗ ಸಿಖ್ ಸಂಘಟನೆಯ ಸದಸ್ಯರು ಮತ್ತು ಹಿಂದೂ ಸಂಘಟನೆಯ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಕೆಲವು ಸಿಖ್ ಸಂಘಟನೆಗಳ ಸದಸ್ಯರು ಕತ್ತಿಗಳನ್ನು ಹಿಡಿದು ಬೀದಿಗಿಳಿದರು. ಎರಡೂ ಗುಂಪುಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಘಟನೆಯ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಂದಿದ್ದು ಇದರಲ್ಲಿ ಒಂದು ವರ್ಗದ ಜನರು ಕತ್ತಿಗಳನ್ನು ಝಳಪಿಸುವುದನ್ನು ಮತ್ತು ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೆಲವರು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಪೊಲೀಸ್ ಮಹಾನಿರ್ದೇಶಕರೊಂದಿಗೆ (ಡಿಜಿಪಿ) ಮಾತನಾಡಿದ್ದೇನೆ ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳಿದರು.

You might also like
Leave a comment