This is the title of the web page

ಕಾರ್ ಪಲ್ಟಿ; 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು

ನಾಗಪುರ, 25- ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮಾಡಿ ಬರುತ್ತಿದ್ದಾಗ ಮಹಾರಾಷ್ಟ್ರದ ವಾರ್ಧಾದಲ್ಲಿ ಸೋಮವಾರ ರಾತ್ರಿ 11.30ರ ಹೊತ್ತಿಗೆ ನಡೆದ ಅಪಘಾತದಲ್ಲಿ ಬಿಜೆಪಿ ಶಾಸಕನ ಪುತ್ರ ಸೇರಿ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟ ದುರ್ಘಟನೆ ನಡೆದಿದೆ.

ಒಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಿಸಲು ಇವರೆಲ್ಲ ಹೋಗಿದ್ದರು. ಪಾರ್ಟಿ ಮುಗಿಸಿ ವಾಪಸ್​ ಬರುವಾಗ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.

ಇವರು ಕಾರಿನಲ್ಲಿ ಸೆಲ್ಸುರಾ ಹಳ್ಳಿಯ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಾಡುಪ್ರಾಣಿಯೊಂದು ಅಡ್ಡಬಂದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಾರ್ಧಾ ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಪ್ರಶಾಂತ​ ಹೋಲ್ಕರ್​, ಕಾಡು ಪ್ರಾಣಿ ಅಡ್ಡ ಬಂದ ಹಿನ್ನೆಲೆಯಲ್ಲಿ ಕಾರಿನ ಡ್ರೈವರ್​ ಅದನ್ನು ತಪ್ಪಿಸಲು ಬಲವಾಗಿ ತಿರುಗಿಸಿದ ಪರಿಣಾಮ ಕಾರು ಅಲ್ಲಿಯೇ ಇದ್ದ ಸೇತುವೆ ಕಟ್ಟೆಗೆ ಹೊಡೆದು, ಸೇತುವೆಯ ಕೆಳಗಿನ ಮೋರಿಗೆ ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಅದರಲ್ಲಿರುವ ವಿದ್ಯಾರ್ಥಿಗಳೆಲ್ಲ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೃತ ವೈದ್ಯಕೀಯ ವಿದ್ಯಾರ್ಥಿಗಳನ್ನು ಆವಿಷ್ಕಾರ​, ನೀರಜ​ ಚವನ್​, ನಿತೇಶ​ ಸಿಂಗ್​, ವಿವೇಕ​ ನಂದನ್​, ಪ್ರತ್ಯುಷ​ ಸಿಂಗ್​, ಶುಭಂ ಜೈಸ್ವಾಲ್​, ಪವನ​ ಶಕ್ತಿ ಎಂದು ಗುರುತಿಸಲಾಗಿದೆ. ಇವರಲ್ಲಿ ಆವಿಷ್ಕಾರ್​ ಬಿಜೆಪಿಯ ತಿರೋರಾ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯ ಭರತಲಾಲ ರಹಂಗ್‌ಡೇಲ್ರ ಪುತ್ರ ಎಂದು ಹೇಳಲಾಗಿದೆ. ಇವರಲ್ಲಿ  ಮೂವರು ಉತ್ತರ ಪ್ರದೇಶ, ಇಬ್ಬರು ಬಿಹಾರ ಮತ್ತು ಒಬ್ಬಾತ ಒಡಿಶಾದವನಾಗಿದ್ದಾನೆ.

You might also like
Leave a comment