This is the title of the web page

ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

 

ಕಲಬುರಗಿ, ೨೯- ರಾಜ್ಯಾದ್ಯಂತ ಸಂಚಲನ ಮೂಡಿಸಿರುವ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಭಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ಹಾಗೂ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮತ್ತು ಸುನೀತಾ, ಅರ್ಚನಾ ಎಂಬವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಯನ್ನು ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಐಡಿ ಎಸ್​ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ಅವರನ್ನು ವಶಕ್ಕೆ ಪಡೆದುಕೊಂಡಿದೆ.

ಸುನೀತಾ ಮತ್ತು ಅರ್ಚನಾ  ಅವರನ್ನೂ ಸಹ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಅಕ್ರಮದಲ್ಲಿ ಅವರ ಪಾತ್ರ ಕಂಡುಬಂದರೆ ಅವರನ್ನು ಕೂಡ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿತ್ತು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾಗಿರುವ ದಿವ್ಯಾ ಹಾಗರಗಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡವು ತನಿಖೆಗೆ ಅಸಹಕಾರ, ಆರೋಪಿಗಳ ನಾಪತ್ತೆಗೆ ಬೆಂಬಲ ಆರೋಪದ ಮೇಲೆ ರಾಜೇಶ ಹಾಗರಗಿಯನ್ನು ಬಂಧಿಸಿದ್ದರು.

ನಾಪತ್ತೆಯಾಗಿದ್ದ ದಿವ್ಯಾ ಹಾಗರಗಿಗಾಗಿ ಕಳೆದ 18 ದಿನಗಳಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಮಹಾರಾಷ್ಟ್ರದಲ್ಲೇ ದಿನಕ್ಕೊಂದು ಸ್ಥಳ ಬದಲಿಸುತ್ತಿದ್ದುದರಿಂದ ಪೊಲೀಸರಿಗೆ ಕಷ್ಟವಾಗಿತ್ತು.

ಸಾಕಷ್ಟು ದಿನಗಳ ವರೆಗೆ ದಿವ್ಯಾ ಹಾಗರಗಿ ಪತ್ತೆಯಾಗದ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಸೇರಿ ಆರು ಆರೋಪಿಗಳಿಗೆ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಆರೋಪಿಗಳಾದ ದಿವ್ಯಾ ಹಾಗರಗಿ, ಮಂಜುನಾಥ, ಕಾಶೀನಾಥ, ರವೀಂದ್ರ, ಶಾಂತಿಬಾಯಿ, ಅರ್ಚನಾ ಅವರನ್ನು ಬಂಧಿಸುವಂತೆ ಕಲಬುರಗಿಯ ಮೂರನೇ ಜೆಎಂಎಫ್​ಸಿ ಕೋರ್ಟ್​ನಿಂದ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ.

2021 ರ ಆಗಸ್ಟ್ 3 ರಂದು ರಾಜ್ಯಾದ್ಯಂತ ಪಿಎಸ್ ಐ ಪರೀಕ್ಷೆ ನಡೆದಿತ್ತು. 2022ರ ಜನವರಿ 19 ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೂಡಾ ಪ್ರಕಟ ಮಾಡಲಾಗಿತ್ತು. ಆದರೆ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್​ಐ ಪರೀಕ್ಷೆ ಅಕ್ರಮ ನಡೆದ ಆರೋಪ ಬಲವಾಗಿ ಕೇಳಿಬಂದಿತ್ತು. ನೇಮಕಾತಿಯಲ್ಲಿ ಗೋಲ್‌ಮಾಲ್‌ ಆಗಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ದೂರು ನೀಡಿದ್ದರು. ಗೃಹ ಇಲಾಖೆಯಿಂದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಪರೀಕ್ಷೆ ಮುಗಿದ ಮೇಲೆ ಒಎಂಆರ್ ಶೀಟ್​ನಲ್ಲಿ ಖಾಲಿ ಬಿಟ್ಟ ಪ್ರಶ್ನೆಗಳಿಗೆ ದಿವ್ಯಾ ಹಾಗರಗಿ ಉತ್ತರ ಬರೆಸಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು. ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಹತ್ತು ಜನ ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಇತ್ತು. ಹತ್ತು ಅಭ್ಯರ್ಥಿಗಳೂ ಅಕ್ರಮವಾಗಿ ಪರೀಕ್ಷೆ ಬರೆದಿರುವ ಆರೋಪವಿದೆ. ಈ ಪೈಕಿ ಈಗಾಗಲೇ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಕೊಠಡಿ ಮೇಲ್ವಿಚಾರಕಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಜಾಮೀನಿಗೆ ಅರ್ಜಿ:

ಸಿಐಡಿ ಅಧಿಕಾರಿಗಳ ತಂಡ ದಿವ್ಯಾ ಹಾಗರಗಿ ಮತ್ತು ತಂಡವನ್ನು ಕಲಬುರಗಿಗೆ ಕರೆತರಲಿದ್ದು, ಅಲ್ಲಿ ಆಕೆಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಬಂಧಿತ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕಿ ಎಂಬುದು ಮುಖ್ಯವಾಗಿದೆ.

ತನ್ನ ಬಂಧನವಾಗುತ್ತಿದ್ದಂತೆ ವಕೀಲರ ಮೂಲಕ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು.

You might also like
Leave a comment