This is the title of the web page

ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದಿಲ್ಲ

ಬೆಂಗಳೂರು, 14- ಕೊರೋನಾ ನಿಯಂತ್ರಣಕ್ಕೆ ಲಾಕ್‍ಡೌನ್‍ ಅನಿವಾರ್ಯವಾದರೂ ಬಡ ಜನರಿಗೆ ಅದರಿಂದಾಗುವ ಸಮಸ್ಯೆ ಅಷ್ಟಿಷ್ಟಲ್ಲ. ಎರಡು ಬಾರಿ ಮಾಡಲಾಗಿದ್ದ ಲಾಕ್ ಡೌನ್ ನಿಂದ ಅದು ಗೊತ್ತಾಗಿದೆ. ಆದಕಾರಣ ಇನ್ನು ಮುಂದೆ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಸಚಿವ ಸುಧಾಕರ ಮಾತನಾಡಿದರು. ಲಾಕ್‍ಡೌನ್ ಮೂಲಕ ಸೋಂಕು ನಿಯಂತ್ರಣ ಆಗುವುದಿಲ್ಲ. ಎರಡು ಬಾರಿ ಲಾಕ್‍ಡೌನ್ ಮಾಡಿ ಜನರಿಗೆ ಬಹಳ ಸಮಸ್ಯೆ ಆಗಿದೆ. ನಿನ್ನೆ ಮೋದಿ ಅವರು ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್‍ಡೌನ್‍ನಂತಹ ನಿಯಮ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

ಲಸಿಕೆ ತೆಗೆದುಕೊಂಡು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿ. ಬಹಿರಂಗ ಸಮಾವೇಶ, ಗುಂಪು ಸೇರುವುದು ಮಾಡಬೇಡಿ. ಬರುವ ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿಕೊಂಡರು.

ಇಂದಿನಿಂದ ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ ಹಾಗು ಈ ತಿಂಗಳು ನಿಯಮ ಮುಂದುವರೆಯುತ್ತದೆ. ಜನತೆ ಸಹಕಾರ ನೀಡಬೇಕು. ಅನೇಕ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಯಾರು ಕೂಡ ಉದಾಸೀನ ಮಾಡಬಾರದು ಎಂದು ಸಚಿವರು ಹೇಳಿದರು

ರಾಜ್ಯದಲ್ಲಿ ಕೊರೋನಾ ಇನ್ನು ಪೀಕ್‍ಗೆ ಹೋಗಿಲ್ಲ. ತಜ್ಞರು ಕೂಡಾ ಇದನ್ನು ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಸೋಂಕು ಹೆಚ್ಚಳವಾಗುತ್ತದೆ. 3-4ನೇ ವಾರದಿಂದ ಕಡಿಮೆ ಆಗುತ್ತೆ ಅಂತ ತಜ್ಞರು ಹೇಳಿದ್ದಾರೆ ಎಂದು ಅವರು ಎಚ್ಚರಿಸಿದರು.

ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ ಶೇ.5ರಿಂದ 6ರಷ್ಟು ಮಂದಿ ಮಾತ್ರ ಆಸ್ಪತ್ರೆ ಸೇರುತ್ತಿರುವುದು ಸಮಾಧಾನದ ವಿಷಯ ಎಂದು ಅವರು ವಿವರಿಸಿದರು.

You might also like
Leave a comment