This is the title of the web page

40 ವರ್ಷಗಳಲ್ಲಿ ಆಗದ ಕೆಲಸ 40 ತಿಂಗಳಲ್ಲಿ ಮಾಡಿದ್ದೇವೆ : ಮೋದಿ 

 

ಬೆಂಗಳೂರು : ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಹಿಂದಿನ ಸರ್ಕಾರಗಳು 40 ವರ್ಷಗಳಿಂದ ಚರ್ಚೆಯಲ್ಲೇ ಕಾಲ ಕಳೆದರು. ಆದರೆ ನಾವು 40 ತಿಂಗಳಲ್ಲಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊಮ್ಮಘಟ್ಟದಲ್ಲಿ 33 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮದು ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಸದಾ ಬದ್ಧವಾಗಿದ್ದು ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ ಎಂದರು.

ಬೆಂಗಳೂರು ಕನಸುಗಳ ನಗರ. ಈ ನಗರಕ್ಕೆ 40 ವರ್ಷಗಳ ಹಿಂದೆಯೇ ಸಬ್ ಅರ್ಬನ್ ರೈಲು ಸೇರಿದಂತೆ ಪ್ರಯಾಣ ಸಮಯವನ್ನು ಕಡಿಮೆಗೊಳಿಸುವ ಮತ್ತು ಟ್ರಾಫಿಕ್ ಜಾಮ್ ನಿಂದ ಮುಕ್ತಿ ನೀಡುವ ಇತರ ಯೋಜನೆಗಳು ಲಭ್ಯವಾಗಿದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ನನ್ನನ್ನು ನಂಬಿ ಜವಾಬ್ದಾರಿ ಕೊಟ್ಟಿದ್ದೀರಿ, ಪ್ರತಿ ಕ್ಷಣವನ್ನೂ ನಿಮ್ಮ ಸೇವೆಗೆ ಮೀಸಲಿಟ್ಟಿದ್ದೇನೆ ಎಂದು ಮೋದಿ ಹೇಳಿದರು.

ರಾಜ್ಯಕ್ಕೆ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, 7 ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. 12 ಸಾವಿರ ಕಿ.ಮೀ ರೈಲು ಮಾರ್ಗ ನಿರ್ಮಿಸಿದ್ದೇವೆ. ಒಂದು ಭಾರತ ಶ್ರೇಷ್ಠ ಭಾರತ ಸಾಲಿಗೆ ಬೆಂಗಳೂರು ಮಾದರಿಯಾಗಿದೆ.

8 ವರ್ಷಗಳಿಂದ ರೈಲು ಯೋಜನೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದೇವೆ ಸ್ವಚ್ಛ, ಸುರಕ್ಷಾ, ಜನಸ್ನೇಹಿ ರೈಲು ಸಂಚಾರದ ಸುಧಾರಣೆ ಮಾಡಿದ್ದೇವೆ ಎಂದು ಸಭೆಯಲ್ಲಿ ತಿಳಿಸಿದರು.

You might also like
Leave a comment