This is the title of the web page

ಗುತ್ತಿಗೆದಾರರಿಂದ 40% ಕಮೀಷನ್ ಕೇಳುತ್ತಿರುವ ಈಶ್ವರಪ್ಪ; ಪ್ರಧಾನಿ ಮೋದಿಗೆ ದೂರು

 

ಬೆಳಗಾವಿ, ೨೮- ನೋಟು ಎಣಿಸುವ ಮಶೀನುಗಳನ್ನು ಮನೆಯಲ್ಲಿಟ್ಟು ವ್ಯವಹಾರ ಮಾಡುವ ಆರೋಪ ಸೇರಿದಂತೆ ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುವ ಕರ್ನಾಟಕದ ಪಂಚಾಯತ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರು ಈ ಬಾರಿ ಗುತ್ತಿಗೆದಾರರಿಂದ ಭಾರಿ ಮೊತ್ತದ ಕಮೀಷನ್ ಕೇಳುತ್ತಿರುವ ಆರೋಪ ಕೇಳಿ ಬಂದಿದೆ.

ಬೆಳಗಾವಿಯ ‘ಹಿಂದು ವಾಹಿನಿ’ ಯ ಕಾರ್ಯದರ್ಶಿ ಸಂತೋಷ ಪಾಟೀಲ ಎಂಬ ಸಾರ್ವಜನಿಕ ಕಾಮಗಾರಿ ಗುತ್ತಿಗೆದಾರರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಾಡಿದ ಕೆಲಸಕ್ಕೆ ಹಣ ಮಂಜೂರು ಮಾಡಲು ಈಶ್ವರಪ್ಪ ಅವರು ಶೇಕಡಾ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಅಷ್ಟೊಂದು ಲಂಚ ಕೊಡುವ ಶಕ್ತಿ ನನ್ನಲ್ಲಿಲ್ಲ. ದಯವಿಟ್ಟು ಮಧ್ಯ ಪ್ರವೇಶಿಸಿ ನ್ಯಾಯಕೊಡಿಸಿ ಎಂದು ಅವರು ದೇಶದ ಪ್ರಧಾನಿ ಬಳಿ ಮನವಿ ಮಾಡಿದ್ದಾರೆ.

“ಪಂಚಾಯತ ರಾಜ್ ಹಾಗು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ ಸಂಬಂಧಿಸಿದ ಇಲಾಖೆಯ ಕಾಮಗಾರಿಯನ್ನು ಅಧಿಕೃತ ಅನುಮತಿಯಿಲ್ಲದೇ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ 108 ವಿವಿಧ ಚಿಕ್ಕ ಕಾಮಗಾರಿ ಕೈಗೊಳ್ಳುವಂತೆ ಮೌಖಿಕ ಆದೇಶವನ್ನು 2020ರ ಅಂತ್ಯಕ್ಕೆ ಕೊಟ್ಟು ಒಂದು ವರ್ಷದಲ್ಲಿ ಎಲ್ಲ ಕಾಮಗಾರಿ ಮುಗಿಸುವಂತೆ ಈಶ್ವರಪ್ಪ ಆದ್ದೇಶಿಸಿದ್ದರು. ಅದರಂತೆ ನಾನು ನನ್ನ ಇತರ ಗುತ್ತಿಗೆದಾರ ಸ್ನೇಹಿತರು ಸೇರಿ ನಿಗದಿತ ಅವಧಿಯಲ್ಲಿ ಎಲ್ಲ ಕಾಮಗಾರಿ ಪೂರೈಸಿ ಸಂಬಂಧಿಸಿದ ಇಲಾಖೆಗೆ 2022 ಫೆಬ್ರವರಿಯಲ್ಲಿ ಹಸ್ತಾಂತರಿಸಿದ್ದೇವೆ. ಅದರೆ ಕೆಲಸದ ಅನುಮತಿಯಿಲ್ಲದೇ ಮಾಡಿದ ಕೆಲಸದ ಬಿಲ್ ಕೊಡಲು ಇಲಾಖೆ ನಿರಾಕರಿಸಿದೆ. ಸಚಿವ ಈಶ್ವರಪ್ಪ ಅವರನ್ನು ಕೇಳಿದರೆ ಗುತ್ತಿಗೆಯ ಒಟ್ಟು ಮೊತ್ತ ನಾಲ್ಕು ಕೋಟಿ ರೂಪಾಯಿಯ ಶೇಕಡಾ 40ರಷ್ಟು ಕಮೀಷನ್ ಅಂದರೆ ಒಂದು ಕೋಟಿ 60 ಲಕ್ಷ ರೂಪಾಯಿ ಕೊಡದ ಹೊರತು ಬಿಲ್ ಮಂಜೂರು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ತರುವದು. ಬಡ್ಡಿಯ ಮೇಲೆ ಹಣ ತಂದು ಕಾಮಗಾರಿ ಪೂರೈಸಲಾಗಿದೆ. ಈಗ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವದೇ ದಾರಿ ಉಳಿದಿದೆ. ದಯವಿಟ್ಟು ಮಧ್ಯಸ್ತಿಕೆ ವಹಿಸಿ, ನ್ಯಾಯ ಒದಗಿಸಿ ಎಂದು ಸಂತೋಷ ಪಾಟೀಲ ಅವರು ಪ್ರಧಾನಿ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ.

ಈಶ್ವರಪ್ಪ ಅವರ ಕಮಿಷನ್ ಬೇಡಿಕೆ ಕುರಿತು ಗುತ್ತಿಗೆದಾರ ಪಾಟೀಲ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಗಿರಿರಾಜ ಸಿಂಗ್, ಬಿಜೆಪಿ ನಾಯಕ ಬಿ.ಎಲ್. ಸಂತೋಷ, ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ಭೆಟ್ಟಿಯಾದರೂ ಯಾವ ಪ್ರಯೋಜನವಾಗಿಲ್ಲವೆಂದು ಅವರು ಪ್ರಧಾನಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

You might also like
Leave a comment