Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಡಿಸೆಂಬರದಿಂದ ಗೋವಾ-ಬೆಳಗಾವಿ ನಡುವೆ ವಿದ್ಯುತ್ ಚಾಲಿತ ಬಸ್ 


ಬೆಳಗಾವಿ : ಎಲ್ಲವೂ ಯೋಜನೆಯಂತೆ ನಡೆದರೆ ಈ ವರ್ಷಾಂತ್ಯಕ್ಕೆ ಗೋವಾ ಬೆಳಗಾವಿ ನಡುವೆ ವಿದ್ಯುತ್ ಚಾಲಿತ ಬಸ್ ಸೇವೆ ಆರಂಭವಾಗಲಿದೆ. ಕೇಂದ್ರ ಸರ್ಕಾರದಿಂದ ಗೋವಾ ಸರ್ಕಾರ 150 ಎಲೆಕ್ಟ್ರಿಕ್ ಬಸ್ ಗಳನ್ನು ಪಡೆಯಲಿದ್ದು ಅವುಗಳಲ್ಲಿ ಕೆಲವು ಬೆಳಗಾವಿಗೆ ಬಳಸಲಿದೆ.

ಗೋವಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಾದ ಕದಂಬ ಟ್ರಾನ್ಸಪೋರ್ಟ ಕಾರ್ಪೋರೇಶನವು ಬೆಳಗಾವಿ, ಉತ್ತರ ಕನ್ನಡ ಮಾರ್ಗವಾಗಿ ಹಲವು ಬಸ್ ಗಳನ್ನು ಕರ್ನಾಟಕಕ್ಕೆ ಬಿಡುತ್ತಿದೆ.

ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಕೇಂದ್ರವಾಗಿರುವ, ಬೌಗೋಳಿಕವಾಗಿ ಬೆಳಗಾವಿ ಜಿಲ್ಲೆಯ ಅರ್ಧದಷ್ಟು ವಿಸ್ತಾರವಾಗಿಲ್ಲದ ಗೋವಾ ಪ್ರವಾಸೋದ್ಯಮದ, ಹೋಟೆಲ್ ಉದ್ಯಮದ ನಂತರ ಹೆಚ್ಚು ಆದಾಯ ಪಡೆಯುವದೇ ಕರ್ನಾಟಕಕ್ಕೆ ಓಡಿಸುವ ಬಸ್ ಗಳ ಮೂಲಕ. ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ತರುವ ಗೋವಾ ಬಸ್ ಗಳು ಇಲ್ಲಿಂದ ಮರಳಿ ಹೋಗುವಾಗಲೂ ಪ್ರಯಾಣಿಕರಿಂದ ತುಂಬಿಯೇ ತೆರಳುತ್ತವೆ. ಹೀಗಾಗಿ ಹಾನಿಯ ಪ್ರಶ್ನೆಯೇ ಉದ್ಭವಿಸುವದಿಲ್ಲ. ಆದರೆ ಹೆಚ್ಚುತ್ತಿರುವ ಇಂಧನದ ವೆಚ್ಚ ಸರಿದೂಗಿಸಲು ವಿದ್ಯುತ್ ಚಾಲಿತ ಬಸ್ ಗಳನ್ನು ಬಳಸಲು ನಿರ್ಧರಿಸಿದೆ. ಈಗಾಗಲೇ ವಿದ್ಯುತ್ ಚಾಲಿತ ಬಸ್ ಗಳನ್ನು ತನ್ನ ರಾಜ್ಯದಲ್ಲಿ ಆರಂಭಿಸಿರುವ ಗೋವಾ, ಮೊದಲು ಬೆಳಗಾವಿ ನಂತರ ಬಾಗಲಕೋಟ, ವಿಜಯಪುರ ಜಿಲ್ಲೆಯವರೆಗೂ ವಿಸ್ತರಿಸಲು ಯೋಜಿಸಿದೆ.

ಗೋವಾದಲ್ಲಿ ಬಾಗಲಕೋಟ, ವಿಜಯಪುರ, ಗದಗ, ರಾಯಚೂರು ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ನಿತ್ಯ ನೂರಾರು ಜನ ಎರಡೂ ಕಡೆಯಿಂದ ಸಂಚರಿಸುತ್ತಾರೆ.

ಬೆಳಗಾವಿಯಲ್ಲೂ ಎಲೆಕ್ಟ್ರಿಕ್ ಚಾರ್ಜ ಯುನಿಟ್ ಸ್ಥಾಪಿಸುವ ಯೋಜನೆ ಹೊಂದಿದ್ದು, ಗೋವಾದಿಂದ ಹೊರಡುವ ಬಸ್ ಗಳು, ಬೆಳಗಾವಿಯಲ್ಲಿ ಪುನಃ ಚಾರ್ಜ ಆಗಿ ಮುಂದೆ ಬಾಗಲಕೋಟ, ವಿಜಯಪುರವರೆಗೆ ಸಂಚರಿಸಲಿವೆ. ಮುಂದೆ ಈ ಜಿಲ್ಲೆಗಳಲ್ಲೂ ಚಾರ್ಜ ಮಾಡುವ ಯೂನಿಟ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.

ಒಮ್ಮೆ ಸಂಪೂರ್ಣ ಚಾರ್ಜಗೊಂಡ ಬಸ್ ನೂರು ಕಿಲೋ ಮೀಟರ್ ಸಂಚರಿಸುತ್ತದೆ, ಹಾಗಾಗಿ ಬೆಳಗಾವಿ ಮತ್ತು ಬಾಗಲಕೋಟ, ವಿಜಯಪುರಗಳಲ್ಲೂ ಚಾರ್ಜ ಯುನಿಟ್ ಸ್ಥಾಪಿಸಲಿದೆ.

ಆದರೆ ಗೋವಾಗೆ ಕರ್ನಾಟಕದ ರಸ್ತೆಗಳದ್ದೇ ಚಿಂತೆಯಾಗಿದ್ದು ರಾಯಚೂರು-ಪಣಜಿ ರಾಜ್ಯ ಹೆದ್ದಾರಿ 4ಎ ಬೆಳಗಾವಿಯಿಂದ ಪಣಜಿವರೆಗೆ 154 ಕೀಲೋ ಮೀಟರ್ ವಿಸ್ತಾರ ಹೊಂದಿದೆ. ತನ್ನ ರಾಜ್ಯದಲ್ಲಿ ಸುಮಾರು 50ಕಿಮಿ ರಸ್ತೆ ಹೊಂದಿರುವ ಗೋವಾ ರಸ್ತೆಯನ್ನು ಉತ್ತಮ ಸ್ಥಿತಿಯಲ್ಲಿಟ್ಟಿದೆ. ಆದರೆ ಆ ರಾಜ್ಯದ ಗಡಿಯಿಂದ ಬೆಳಗಾವಿಯವರೆಗಿನ ಸುಮಾರು 100 ಕಿಮಿ ರಸ್ತೆ ಕೆಟ್ಟಿದ್ದು ಮರು ನಿರ್ಮಾಣಗೊಂಡಿಲ್ಲ.

ಈ ವಿಷಯದ ಬಗ್ಗೆ ಪಣಜಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ ಸಾವಂತ, ನಮ್ಮ ರಾಜ್ಯದ ಗಡಿಯವರೆಗೆ ರಾಜ್ಯ ಹೆದ್ದಾರಿ ಚೆನ್ನಾಗಿದೆ, ಆದರೆ ಅಲ್ಲಿಂದ ಮುಂದೆ ಕರ್ನಾಟಕದಲ್ಲಿ ರಸ್ತೆ ವಾಹನ ಸಂಚಾರಕ್ಕೆ ಸುಗಮವಾಗಿಲ್ಲ. ಈ ರಸ್ತೆಯ ಮೂಲಕ ಬಂದವರು ನನಗೆ ತಿಳಿಸಿದ ಪ್ರಕಾರ ಕರ್ನಾಟಕ ವ್ಯಾಪ್ತಿಯ ರಸ್ತೆ ಪ್ರಯಾಣ ನಿಜಕ್ಕೂ ಭಯಾನಕವಾಗಿದೆ. ನಾವು ಉದ್ದೇಶಿಸಿರುವ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಉತ್ತಮ ರಸ್ತೆ ಅಗತ್ಯ, ಅದಕ್ಕೆ ನಾನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದು ಅವರು ಖಾನಾಪುರ ಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾದ ನಂತರ ರಸ್ತೆ ಸರಿಪಡಿಸುವದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

ಈ ವಿಷಯ ಪ್ರಸ್ತಾಪಿಸಿದ ಗೋವಾ ಸಾರಿಗೆ ಸಚಿವ ಉಲ್ಲಾಸ ತುಮೇಕರ ಅವರು, ರಾಜ್ಯದ ಬೇಡಿಕೆಯಂತೆ ಎರಡನೇ ಹಂತದ ಭಾಗವಾಗಿ 150 ಎಲೆಕ್ಟ್ರಿಕ್ ಬಸ್ ಗಳು ಡಿಸೆಂಬರ್ ತಿಂಗಳಲ್ಲಿ ಬರಲಿದ್ದು ಅವುಗಳಲ್ಲಿ ಕೆಲವೊಂದನ್ನು ಬೆಳಗಾವಿ, ಕಾರವಾರ ಮೂಲಕ ಕರ್ನಾಟಕದಲ್ಲಿ ಬಳಸಲಾಗುವದು ಎಂದು ತಿಳಿಸಿ ಕರ್ನಾಟಕ ವ್ಯಾಪ್ತಿಯ ರಸ್ತೆಗಳ ಕುರಿತು ಮುಖ್ಯಮಂತ್ರಿ ಗಳು ಈಗಾಗಲೇ ಕರ್ನಾಟಕದೊಂದಿಗೆ ಚರ್ಚಿಸಿದ್ದಾರೆ. ಯೋಜನೆಯಂತೆ ನಡೆದರೆ ಡಿಸೆಂಬರ್ ನಲ್ಲಿ ಬೆಳಗಾವಿಗೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿಸಿದರು.


A B Dharwadkar
the authorA B Dharwadkar

Leave a Reply