This is the title of the web page

ದೇವರಿಂದಲೂ ಶಿಕ್ಷಕರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ : ಗೆಲುವಿನ ಬಳಿಕ ಹೊರಟ್ಟಿ ಮಾತು 

ಬೆಳಗಾವಿ, ೧೫- ಸತತ ಎಂಟನೇ ಬಾರಿ ವಿಧಾನ ಪರಿಷತ್ತಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಇಷ್ಟು ಸಲ ಪರಿಷತ್ತಿಗೆ ಆಯ್ಕೆಯಾದ ದೇಶದ ಮೊದಲಿಗರು.

ಸತತ 42 ವರ್ಷ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹೊರಟ್ಟಿ ಇನ್ನೂ 6 ವರ್ಷ ಪರಿಷತ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್ಯದವರೇ ಆದ ಟಿ.ಎನ್.ನರಸಿಂಹಮೂರ್ತಿ ಹಾಗು ಉತ್ತರಪ್ರದೇಶದಲ್ಲಿ ಒಬ್ಬರು ನಾಲ್ಕು ಸಲ ಆಯ್ಕೆಯಾಗಿದ್ದು ದ್ವಿತೀಯ ಸ್ಥಾನದಲ್ಲಿದ್ದಾರೆ.

ಆಶ್ಚರ್ಯದ ವಿಷಯವೆಂದರೆ 42 ವರ್ಷ ಶಿಕ್ಷಕರನ್ನು ಪ್ರತಿನಿಧಿಸಿದ್ದ ಹೊರಟ್ಟಿ ಶಿಕ್ಷಣ ಇಲಾಖೆಯ ಕುರಿತು ನೀಡಿರುವ ಹೇಳಿಕೆ ಚಿಂತನೆಗೆ ಈಡುಮಾಡಿವೆ.

ತಮ್ಮ ಗೆಲುವು ಖಚಿತ ಆಗುತ್ತಿದ್ದಂತೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಐತಿಹಾಸಿಕ ಗೆಲುವು ತಂದು ಕೊಟ್ಟಿರುವ ಶಿಕ್ಷಕರ ಋಣ ಹೇಗೆ ತೀರಿಸುತ್ತಿರಿ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ನಾನು ಶಿಕ್ಷಕರ ಋಣವನ್ನು ತೀರಿಸುತ್ತಾ ಬಂದಿದ್ದೇನೆ.

ಆದರೆ ಶಿಕ್ಷಣ ಇಲಾಖೆ ಸಮಸ್ಯೆ ರಹಿತ ಇಲಾಖೆ ಮಾಡಲು ದೇವರಿಂದಲೂ ಸಾಧ್ಯವಿಲ್ಲ, ಒಂದು ಸಮಸ್ಯೆ ಪರಿಹರಿಸಿದ ನಂತರ ಇನ್ನೊಂದು ಸಮಸ್ಯೆ ಉದ್ಭವವಾಗುತ್ತದೆ. ಅವುಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿರುತ್ತೇವೆ.

ಅವರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದಕ್ಕೆ ಅವರು ನನ್ನನ್ನು ಪುನಃ ಆಯ್ಕೆ ಮಾಡಿದ್ದಾರೆ. ಅವರ ಋಣವನ್ನು ತೀರಿಸಬೇಕು ಎಂದು ಅವತ್ತಿಂದ ಅವತ್ತೆ ಅವರ ಸಮಸ್ಯೆಗಳನ್ನು ಪರಿಹರಿಸಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಕ್ಕೆ ಮತ್ತೆ ನನಗೆ ಗೆಲ್ಲಿಸಿದ್ದಾರೆ ಎಂದರು.

ಇನ್ನು ಸಭಾಪತಿ ಪೀಠವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ದುರ್ಬಳಕೆ ಅಲ್ಲ, ಸಭಾಪತಿ ಪೀಠದಲ್ಲಿ ಕುಳಿತುಕೊಂಡಿರುವ ಒಂದು ಫೋಟೋ ಹಾಕಿದ್ದಾರೆ. ಇದನ್ನೇ ದುರ್ಬಳಕೆ ಅಂದಿದ್ದಾರೆ. ಆ ನೋಟಿಸ್‍ಗೆ ಕಾನೂನು ಪ್ರಕಾರ ಉತ್ತರಿಸುತ್ತೇನೆ ಎಂದರು.

ಸಭಾಪತಿಯಾಗಿ ಮುಂದುವರಿಯುತ್ತಿರಾ ಅಥವಾ ಸಚಿವರಾಗುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದು ಪಕ್ಷಕ್ಕೆ ಸಂಬಂಧಿಸಿದ ವಿಷಯ. ನನಗೆ ಯಾವುದೇ ಭರವಸೆ ಕೊಟ್ಟಿಲ್ಲ, ನಾನೂ ಯಾವುದು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕ್ಷಕರ ನೇಮಕಾತಿ ಬಗ್ಗೆ ನಾನು ಒತ್ತಾಯ ಮಾಡುತ್ತಾ ಬಂದಿದ್ದೇನೆ. ಈಗಲೂ ಮಾಡುತ್ತೇನೆ, ಸಭಾಪತಿ ಇದ್ದಾಗ ಮುಖ್ಯಮಂತ್ರಿಗಳನ್ನು ಕರೆದು ಸಭೆ ಮಾಡಿದ್ದೇನೆ. ಕೋವಿಡ್ ಸಂಬಂಧ ವಿಳಂಬವಾಗಿದೆ. ಈಗ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

ಕಾಲ್ಪನಿಕ ವೇತನ ಬಗ್ಗೆ ತಾವು ಧ್ವನಿ ಎತ್ತುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನೇ ವರದಿ ಕೊಟ್ಟಿದ್ದೇನೆ. ಸಭಾಪತಿಯಾಗಿ ತಕ್ಷಣವೇ ಇದನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದ್ದೇನೆ ಎಂದರು.

You might also like
Leave a comment