This is the title of the web page

ಈಶ್ವರಪ್ಪ ವಿರುದ್ಧ ಎಫ್ ಆಯ್ ಆರ್, ಇಂದು ರಾಜೀನಾಮೆ ಸಾಧ್ಯತೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವರಿಷ್ಟರ ಸೂಚನೆಯಂತೆ ಈಶ್ವರಪ್ಪ ಬೆಂಗಳೂರಿಗೆ ತೆರಳಿದ್ದು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಮೃತ ಸಂತೋಷ್ ಪಾಟೀಲ್ ಅವರ ಸಹೋದರ ಪ್ರಶಾಂತ ಪಾಟೀಲ್ ತಡರಾತ್ರಿ 2.20ರ ಸುಮಾರಿಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಲಂ 306ರ ಅಡಿಯಲ್ಲಿ ಈಶ್ವರಪ್ಪ ಮತ್ತು ಅವರ ಆಪ್ತ ಸಹಾಯಕರಾದ ಬಸವರಾಜ್, ರಮೇಶ್ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಆತ್ಮಹತ್ಯೆಗೆ ಕಾರಣ ತಿಳಿಸಿರುವ ಪ್ರಶಾಂತ ಪಾಟೀಲ್, ಸಹೋದರ ಸಂತೋಷ್ ಪಾಟೀಲ್ ಹಿಂಡಲಗಾ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದ. 4 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಚರಂಡಿ ಫೇವರ್ಸ್ ಜೋಡಣೆ ಕಾಮಗಾರಿ ಮಾಡಿಸಿದ್ದ. ಈ ಹಣವನ್ನು ಬಿಡುಗಡೆ ಮಾಡಲು ಸಚಿವ ಈಶ್ವರಪ್ಪ ಶೇ. 40 ಕಮಿಷನ್ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಿಲ್ಲಿ ಉಲ್ಲೇಖಿಸಿದ್ದಾರೆ.

ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್, ತಮ್ಮ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಅವರ ಮರಣ ಪತ್ರ ಸಾಕಷ್ಟು ಸದ್ದು ಮಾಡ್ತಿದೆ. ಸಾವಿಗೂ ಮುನ್ನ ತಮ್ಮ ಮರಣ ಸಂದೇಶವನ್ನು ಮೊಬೈಲ್ ಮೂಲಕ ಕಳಿಸಿರುವ ಸಂತೋಷ್ ಪಾಟೀಲ್, ಉಡುಪಿಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

You might also like
Leave a comment