This is the title of the web page

ಖ್ಯಾತ ಪತ್ರಕರ್ತ ಕಮಾಲ ಖಾನ್ ನಿಧನ

ಹೊಸದಿಲ್ಲಿ, 14-  ಕಳೆದ ಮೂರು ದಶಕಗಳಿಂದ ದೇಶದ ಪ್ರಖ್ಯಾತ ಸುದ್ಧಿವಾಹಿನಿ ಎನ್‌ಡಿಟಿವಿಯಲ್ಲಿ ಹಿರಿಯ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಮಾಲ ಖಾನ್ ಅವರು ಉತ್ತರ ಪ್ರದೇಶದ ಲಖನೌದ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ನಿಧನರಾದರು.

ಉತ್ತರ ಪ್ರದೇಶ ರಾಜಕೀಯದ ಆಳವಾದ ಒಳನೋಟ ಮತ್ತು ಸೊಗಸಾದ ಭಾಷೆಗೆ ಹೆಸರುವಾಸಿಯಾಗಿದ್ದ 61 ವರ್ಷ ವಯಸ್ಸಿನ ಕಮಾಲ ಖಾನ್ ಅವರು ಎನ್​​ಡಿಟಿವಿಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ರಾಮನಾಥ್ ಗೋಯೆಂಕಾ ಪ್ರಶಸ್ತಿ ಮತ್ತು ಗಣೇಶ ಶಂಕರ ವಿದ್ಯಾರ್ಥಿ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ.

ಇಂದು ಪತ್ರಿಕಾರಂಗ ಅಧೋಗತಿಯ ಹಾದಿ ಹಿಡಿದಿದೆ. ಇಂಥ ಸಮಯದಲ್ಲಿ ಖಾನ್ ಅವರಂಥ ಕೆಲವು ಬೆರಳೆಣಿಯಷ್ಟು ಸತ್ಯನಿಷ್ಠ ಪತ್ರಕರ್ತರು ಮಾತ್ರ ಉಳಿದಿದ್ದು, ಕಮಾಲ ಖಾನ್ ಅವರ ಅಗಲುವಿಕೆಯಿಂದ ಪತ್ರಿಕಾರಂಗಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ.

ಅವರ ವರದಿಯ ಗ್ರಹಿಕೆ, ಸಮಗ್ರತೆ ಮತ್ತು ಕಾವ್ಯಾತ್ಮಕ ಕೌಶಲ್ಯದೊಂದಿಗೆ ಕಠಿಣ ಸತ್ಯಗಳನ್ನು ಅವರು ನೀಡಿದ ರೀತಿ ಸದಾ ಎದ್ದು ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಅದ್ಭುತ ಮತ್ತು ಉದಾರ ವ್ಯಕ್ತಿಯಾಗಿದ್ದರು. ತಮ್ಮನ್ನು ಭೇಟಿಯಾದ ಎಲ್ಲರೊಂದಿಗೂ ಅವರು ಹಿತವಾದ ಆತ್ಮೀಯ ಮಾತುಗಳನ್ನಾಡುತ್ತಿದ್ದರು.

“ಖಾನ್ ಅವರ ಕುಟುಂಬಕ್ಕೆ ಇದು ದೊಡ್ಡ ನಷ್ಟ. ಅವರು ಯುಪಿ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಶಾಸಕರ ರಾಜೀನಾಮೆ ಪರ್ವದ ಕುರಿತು ಅವರು ಮಾಡಿರುವ ಕೊನೆಯ ವರದಿಯನ್ನು ಹಂಚಿಕೊಳ್ಳುತ್ತೇವೆ” ಎಂದು ಗೌರವ ಸೂಚಿಸಿ, ಎನ್ ಡಿ ಟಿ ವಿ ಅವರ ಕೊನೆಯ ವರದಿಯನ್ನು ಪ್ರಕಟಿಸಿದೆ.

You might also like
Leave a comment