This is the title of the web page

ಕೃಷಿ ಕಾಯ್ದೆ ರದ್ದು ತಮಟೆ ಬಡಿದು ಸಂಭ್ರಮಿಸಿದ ರೈತಸಂಘ

ಚಾಮರಾಜನಗರ: ನವೆಂಬರ್ 19 ಭಾರಿ ವಿವಾದ ಸೃಷ್ಟಿಸಿದ್ದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಕ್ಕೆ ಪಡೆಯುವುದಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಇಂದು ರೈತಸಂಘದ ಕಾರ್ಯಕರ್ತರು ತಮಟೆ ಬಡಿದು ಕುಣಿದು ಸಂಭ್ರಮಿಸಿದರೆ, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚಾಮರಾಜನಗರದ ಶ್ರೀಚಾಮರಾಜೇಶ್ವರ ಸ್ವಾಮಿ ದೇಗುಲದ ಎದುರು ಜಮಾಯಿಸಿದ ರೈತಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ -209ಹಾದು ಹೋಗಿರುವ ಶ್ರೀ ಭುವನೇಶ್ವರಿ ವೃತ್ತ ತಲುಪಿ, ರೈತಪರ ಹೋರಾಟಕ್ಕೆ ಜಯಸಿಕ್ಕಿದೆ ಎಂದು ಘೋಷಣೆ ಕೂಗಿ, ತಮಟೆ ಬಡಿದು ಕುಣಿದು ಸಂಭ್ರಮಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿ ರೈತರ ಪರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿತ್ತು. ಈ ಕಾಯ್ದೆಗಳು ರೈತರಿಗೆ ಮಾರಕವಾಗಿದೆ ಎಂದು ಒತ್ತಾಯಿಸಿ ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದೊಂದು ವರ್ಷದಿಂದ ರೈತ ಸಂಘಟನೆಗಳು ದೆಹಲಿ ಮತ್ತು ದೇಶದ ಎಲ್ಲ ಭಾಗಗಳಲ್ಲೂ ಪ್ರತಿಭಟನೆ ಹಾಗೂ ಸತ್ಯಾಗ್ರಹಗಳನ್ನು ಹಮ್ಮಿಕೊಂಡು ಹೋರಾಟ ಮಾಡುತ್ತಿದ್ದವು. ಹಲವಾರು ರೈತರು ಪ್ರಾಣಕಳೆದುಕೊಂಡಿದ್ದರು. ಪರಿಣಾಮ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 3 ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ರೈತಸಂಘದ ಕಾರ್ಯಕರ್ತರು ಸಂಭ್ರಮ ‌ಹಂಚಿಕೊಂಡರು.

You might also like
Leave a comment