Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಬೀದಿ ನಾಯಿಗಳಿಗೆ ಆಹಾರ ನೀಡಿದರೆ ದಂಡ -ಹೈಕೋರ್ಟ


ನಾಗಪುರ : ಬೀದಿ ನಾಯಿಗಳ ಹಾವಳಿ ತಡೆಯಲು ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವವರಿಗೆ 200ಕ್ಕಿಂತ ಹೆಚ್ಚಿಲ್ಲದಂತೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟನ ನಾಗಪುರ ಪೀಠ ಆದೇಶಿಸಿದೆ.

ಬೀದಿಗಳಲ್ಲಿ ಆಹಾರ ನೀಡುವ ಕೆಲ ನಾಗರಿಕರ ಬೇಜವಾಬ್ದಾರಿ ವರ್ತನೆಯಿಂದಾಗಿ ಅಧಿಕಾರಿಗಳ ಕ್ರಮದ ಬಳಿಕವೂ ನಾಗಪುರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ ಎಂದು ನ್ಯಾಯಮೂರ್ತಿ ಸುನೀಲ ಶುಕ್ರೆ ಮತ್ತು ಅನಿಲ ಪನ್ಸಾರೆ ಅವರಿದ್ದ ವಿಭಾಗೀಯ ಪೀಠ ಹೇಳಿತು.

ತಮ್ಮನ್ನು ತಾವು ಬೀದಿ ನಾಯಿಗಳ ಬಗ್ಗೆ ಸಹಾನುಭೂತಿಯುಳ್ಳವರು, ಸ್ನೇಹಿತರು ಎಂದು ಈ ಜನ ಬಿಂಬಿಸಿಕೊಳ್ಳುತ್ತಾರೆ. ಸಮಾಜಕ್ಕೆ ತಾವು ಎಸಗುತ್ತಿರುವ ದೊಡ್ಡ ಹಾನಿ ಲೆಕ್ಕಿಸದೇ ಬೀದಿ ನಾಯಿಗಳಿಗೆ ಆಹಾರ ಮತ್ತಿತರ ಪದಾರ್ಥಗಳನ್ನು ನೀಡುತ್ತಾರೆ.

ಈ ಬೀದಿ ನಾಯಿಗಳ ಪ್ರೇಮಿಗಳು ತಾವು ಮಾಡಿದ ದಾನದ ವಿನಾಶಕಾರಿ ಪರಿಣಾಮ ಅರಿಯುವುದಿಲ್ಲ. ಪ್ರಾಣಿಪ್ರೇಮಿಗಳು ನೀಡುವ ಆಹಾರ ಬಹುತೇಕ ಬೀದಿ ನಾಯಿಗಳನ್ನು ಉಗ್ರಗೊಳಿಸಿ ಅವು ಮನುಷ್ಯರು ಅದರಲ್ಲಿಯೂ ವಿಶೇಷವಾಗಿ ಮಕ್ಕಳ ಬಗ್ಗೆ ಇನ್ನಷ್ಟು ಹಿಂಸಾತ್ಮಕವಾಗಿ ನಡೆದುಕೊಳ್ಳುವಂತೆ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಬೀದಿ ನಾಯಿಗಳ ರಕ್ಷಣೆ ಮತ್ತು ಅವುಗಳ ಒಳಿತಿನ ಬಗ್ಗೆ ಕಾಳಜಿ ಮಾಡುವವರು ಅವುಗಳನ್ನು ದತ್ತು ತೆಗೆದುಕೊಂಡು ಮನೆಗೆ ಒಯ್ಯಬೇಕು ಅಥವಾ ಶ್ವಾನ ಕೇಂದ್ರಗಳಲ್ಲಾದರೂ ಇರಿಸಿ ಅವುಗಳ ನೋಂದಣಿ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕು ಎಂದು ಪೀಠ ಹೇಳಿದೆ.

ನಿಜವಾದ ದಾನ ಎಂಬುದು ಸಂಪೂರ್ಣ ಕಾಳಜಿ ವಹಿಸುವುದರಲ್ಲಿ ಇದೆ. ಆಹಾರ ನೀಡಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಿ ಎಂದು ಆ ಬಡಪಾಯಿ ಜೀವಿಗಳನ್ನು ಬಿಡುವುದರಲ್ಲಿ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಿದೆ.

ಬೀದಿ ನಾಯಿಗಳ ಬಗ್ಗೆ ನಿಜವಾದ ಸಹಾನುಭೂತಿ ಇರುವಂತಹ ಪರೋಪಕಾರಿ ಮಾಡಬೇಕಾದ ಮೂಲಭೂತ ಕರ್ತವ್ಯ ಇದು. ಬೀದಿನಾಯಿಗಳ ಗೆಳೆಯರು ಈ ಮೂಲಭೂತ ಕರ್ತವ್ಯ ಮಾಡುವುದಕ್ಕೆ ಹಿಂಜರಿಯುತ್ತಾರೆ. ಪರಿಣಾಮ, ಬೀದಿನಾಯಿಗಳ ಸಂಖ್ಯೆ ಎಗ್ಗಿಲ್ಲದೆ ಬೆಳೆದು ಉಪದ್ರವ ನೀಡುತ್ತವೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಹೀಗಾಗಿ ನಾಗಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ಸಾರ್ವಜನಿಕ ಸ್ಥಳಗಳು, ಉದ್ಯಾನಗಳು ಇತ್ಯಾದಿಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಬಾರದು ಎಂದು ಪೀಠ ನಿರ್ದೇಶಿಸಿದೆ.

ಬೀದಿನಾಯಿಗಳಿಗೆ ಆಹಾರ ನೀಡಲು ಯಾವುದೇ ವ್ಯಕ್ತಿಗೆ ಆಸಕ್ತಿ ಇದ್ದರೆ, ಅವರು ಮೊದಲು ಬೀದಿನಾಯಿಯನ್ನು ದತ್ತು ಪಡೆದು, ಮನೆಗೆ ಒಯ್ಯಬೇಕು. ಪುರಸಭೆ ಅಧಿಕಾರಿಗಳಲ್ಲಿ ನೋಂದಾಯಿಸಿ ಅಥವಾ ಕೆಲ ಶ್ವಾನ ಆಶ್ರಯ ಗೃಹಗಳಲ್ಲಿ ಇರಿಸಿ ನಂತರ ತಮ್ಮ ಪ್ರೀತಿ- ವಾತ್ಸಲ್ಯ ತೋರಿಸಸಬೇಕು. ನಾಯಿಯ ಬಗ್ಗೆ ಎಲ್ಲಾ ರೀತಿಯ ವೈಯಕ್ತಿಕ ಕಾಳಜಿ ತೆಗೆದುಕೊಂಡು ಅದನ್ನು ಪೋಷಿಸಬಹುದು. ಈ ನಿರ್ದೇಶನ ಉಲ್ಲಂಘಿಸುವವರಿಗೆ ನಾಗಪುರ ಪಾಲಿಕೆ ಪ್ರತಿ ಉಲ್ಲಂಘನೆಗಾಗಿ 200 ರೂ. ಮೀರದಂತೆ ಸೂಕ್ತ ದಂಡ ವಿಧಿಸಬೇಕು ಎಂದು ಪೀಠ ಆದೇಶಿಸಿದೆ.

ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸೆಕ್ಷನ್ 44ರ ಅಡಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮ ಬೀದಿನಾಯಿಗಳನ್ನು ನಾಶಪಡಿಸುವಂತೆ ಇರದೆ ನಿಗದಿತ ಕಾರ್ಯವಿಧಾನ ಬಳಸಿ ಅವುಗಳನ್ನು ಹಿಡಿಯುವಂತಿರಬೇಕು. ಬಳಿಕ ಸೂಕ್ತ ನಿಯೋಜನೆ ವಿಲೇವಾರಿಗಾಗಿ ನಿರ್ವಹಣಾ ಸಮಿತಿಗೆ ಅವುಗಳನ್ನು ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


A B Dharwadkar
the authorA B Dharwadkar

Leave a Reply