ಬೆಳಗಾವಿ: ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಮುಗಿಸಿ ವಾಪಸ್ ಹೋಗುತ್ತಿದ್ದಾಗ ಎರಡು ಗುಂಪುಗಳ ಯುವಕರು ತಲವಾರದಿಂದ ಹೊಡೆದಾಡಿಕೊಂಡಿದ್ದು, ಇದರಲ್ಲಿ ನಾಲ್ವರು ಗಾಯಗೊಂಡ ಘಟನೆ ಇಲ್ಲಿಯ ರುಕ್ಮಿಣಿ ನಗರದಲ್ಲಿ ರವಿವಾರ ರಾತ್ರಿ ನಡೆದಿದೆ.
“ಗಾಯಗೊಂಡವರೂ ಹೊಡೆದವರೂ ಒಂದೇ ಕೋಮಿಗೆ ಸೇರಿದವರು. ಗಾಯಗೊಂಡವರನ್ನು ಬೆಳಗಾವಿ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ, ಇಲ್ಲಿಯ ವರೆಗೆ ಐದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ಉಳಿದವರಿಗೆ ಹುಡುಕಾಟ ನಡೆದಿದೆ” ಎಂದು ಮಾಳಮಾರುತಿ ಠಾಣೆ ಪೊಲೀಸರು “ಸಮದರ್ಶಿ” ಗೆ ಮಾಹಿತಿ ನೀಡಿದ್ದಾರೆ.
ರುಕ್ಮಿಣಿ ನಗರ ಹಾಗೂ ಉಜ್ವಲ್ ನಗರದ ಯುವಕರ ಮಧ್ಯೆ ಈ ಗಲಾಟೆ ಆಗಿದ್ದು, ಮೆರವಣಿಗೆ ಮುಗಿಸಿಕೊಂಡು ಹೋಗುವಾಗ ಒಬ್ಬರಿಗೊಬ್ಬರು ಸಿಟ್ಟಿನಿಂದ ನೋಡಿದ್ದಕ್ಕೆ ಹೊಡೆದಾಡಿಕೊಂಡಿದ್ದಾರೆ. ತಲ್ವಾರ್ ಹಾಗೂ ಚಾಕುವಿನಿಂದ ಘರ್ಷಣೆ ನಡೆದಿದೆ. ಘಟನೆಯಲ್ಲಿ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಗಾಯವಾಗಿದೆ.
ಗಾಯಗೊಂಡವರನ್ನು ಮೊಹಮ್ಮದ ಕೈಫ್, ಸಾಹಿಲ್ ಬಂಡಾರೆ, ತನ್ವೀರ, ಅಸ್ಲಮ್ ಎಂದು ಗುರುತಿಸಲಾಗಿದೆ. “ಇವರೆಲ್ಲ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ” ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಕಮಿಷನರ್ ಎಡಾ ಮಾರ್ಟೀನ್ ಎಂ : ಎರಡು ಗುಂಪುಗಳ ನಡುವೆಯಾದ ಘರ್ಷಣೆಯ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು, ಇದಕ್ಕೆ ಕೋಮು ರೂಪ ಕೊಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 189 ಸೆಕ್ಷನ್ (ಕೊಲೆ ಯತ್ನ) ಅನ್ವಯ ಪ್ರಕರಣ ದಾಖಲಾಗಿದೆ.