ಗಣೇಶ ನಮ್ಮ ಅತ್ಯಂತ ಜನಪ್ರಿಯ ದೇವರು. ಯಾವುದೇ ಕೆಲಸ ಆರಂಭಿಸುವಾಗ ಮೊದಲ ಪೂಜೆ ಸಲ್ಲುವುದು ಗಣೇಶನಿಗೆ. ಏಕೆಂದರೆ ಆತ ವಿಘ್ನ ನಿವಾರಕ. ಸಂಗೀತ ಕಚೇರಿ ಆರಂಭ ಆಗಬೇಕಾದರೂ ಮೊದಲು ಗಣೇಶ ಸ್ತುತಿ. ಆತನ ಸ್ವರೂಪ ಕೂಡ ಬಹಳ ಸರಳ. ಆನೆ ಮುಖದ ಗಣೇಶ ನಮಗೆ ಚಿರ ಪರಿಚಿತ. ಆದರೆ ಪಿಳ್ಳಾರಿ ಎಂದು ಕರೆಯುವ ಗಣೇಶನ ಮೂರ್ತಿ ನಮ್ಮಲ್ಲಿ ಬಹಳ ಕಾಲದಿಂದಲೂ ಬಳಕೆಯಲ್ಲಿ ಇದೆ. ಕಲಸಿದ ಅರಿಶಿನ, ಮಣ್ಣು ಅಷ್ಟೇಕೆ ಒಂದು ಹಿಡಿಯಷ್ಟು ಸಗಣಿ ಹಿಡಿದು ಮೂರು ಬೆರಳುಗಳಿಂದ ಅವುಕಿದರೆ ಮೂಡುವ ಪ್ರತಿಮೆಯೇ ಪಿಳ್ಳಾರಿ. ಅದಕ್ಕೊಂದು ಗರಿಕೆಯ ಕಿರೀಟ ಇದ್ದರಾಯಿತು. ಮನೆಯ ಹೊಸ್ತಿಲಲ್ಲಿ ಇಂಥ ಮೂರ್ತಿಗಳನ್ನು ಇರಿಸುವುದು ಮೊದಲಿನಿಂದ ನಡೆದು ಬಂದ ಸಂಪ್ರದಾಯ. ಜಮೀನಿನಲ್ಲಿ ಬಿತ್ತನೆ ಮತ್ತು ಸುಗ್ಗಿ ಸಮಯಕ್ಕೆ ಹೊಲದ ಬಳಿ ಇಂಥ ಪ್ರತಿಮೆ ನಿರ್ಮಿಸಿ ಪೂಜಿಸಿ, ಆನಂತರ ಕೆಲಸ ಆರಂಭಿಸುವುದು ಸಂಪ್ರದಾಯ. ಕೆಲವು ಕಡೆಗಳಲ್ಲಿ ಇಡೀ ಊರಿನ ಜನ ಪಿಳ್ಳಾರಿಗಳ ಪ್ರತಿಮೆ ಹೊತ್ತು ಮೆರವಣಿಗೆಯಲ್ಲಿ ಸಾಗಿ, ತಮ್ಮ ತಮ್ಮ ಜಮೀನಿನಲ್ಲಿ ಪಿಳ್ಳಾರಿಯನ್ನು ಇರಿಸುವ ಸಂಪ್ರದಾಯವೂ ಇದೆ.
ಹಾಗೆಂದು ಗಣೇಶನನ್ನು ಪ್ರಮುಖ ದೇವರಾಗಿ ಮನೆಗಳಲ್ಲಿ ಇಟ್ಟು ಎಲ್ಲರೂ ಪೂಜಿಸುವುದಿಲ್ಲ. ಅದಕ್ಕೆ ಕಾರಣವೂ ಇದೆ. ಆತನಿಗೆ ನಿತ್ಯ ಶಾಸ್ತ್ರೋಕ್ತ ಪೂಜೆ, ನೈವೇದ್ಯಗಳು ಸಲ್ಲಬೇಕು. ಅದನ್ನು ಪಾಲಿಸದೇ ಇದ್ದಲ್ಲಿ ಗಣೇಶ ಮುನಿಸಿಕೊಳ್ಳುತ್ತಾನೆ ಎಂಬ ನಂಬಿಕೆಯೂ ಇದೆ. ಕೇವಲ ಗಣೇಶ ಉಪಾಸಕರು ಮಾತ್ರ ಈತನ ಮೂರ್ತಿಯನ್ನು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿ, ನಿತ್ಯ ಪೂಜೆ, ನೈವೇದ್ಯ ಸಮರ್ಪಣೆ ಮಾಡುವುದು ಒಂದು ಕ್ರಮ. ಉಳಿದಂತೆ ಪ್ರತಿ ಮನೆಯ ದೇವರ ಮಂಟಪ ಮತ್ತು ಮನೆಯಲ್ಲಿ ಗಣೇಶ ಕೂಡ ಒಬ್ಬ ದೇವರಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬೆಳ್ಳಿ ವಿಗ್ರಹ ಇರಬಹುದು ಅಥವಾ ಪಠ ಇರಬಹುದು, ಅದಕ್ಕೆ ಉಳಿದ ದೇವರಿಗೆ ಸಲ್ಲುವ ಹಾಗೆ ನಿತ್ಯ ಪೂಜೆ ಸಲ್ಲುತ್ತದೆ. ಆತನಿಗೆ ಕೆಂಪು ದಸವಳ, ಗರಿಕೆ ತುಂಬಾ ಇಷ್ಟ ಎಂದು ಭಕ್ತರ ಭಾವನೆ.
ಇಷ್ಟಾಗಿ ಗಣೇಶನಿಗೆಂದೇ ಮೀಸಲಾದ ದೇಗುಲಗಳು ನಮ್ಮಲ್ಲಿ ಕಡಿಮೆಯಾದರೂ ಕೆಲವು ಕಡೆಗಳಲ್ಲಿ ಪ್ರಸಿದ್ಧ ಗಣಪತಿ ದೇಗುಲಗಳು ಇರುವುದು ನಿಜ. ಅಂಥ ಗಣೇಶ ಮೂರ್ತಿಗಳ ಸಾಲಿನಲ್ಲಿ ಮೊದಲು ನಿಲ್ಲುವುದು ಹಂಪಿಯ ಸಾಸಿವೆ ಕಾಳು ಮತ್ತು ಕಡಲೆ ಕಾಳು ಗಣಪತಿ ಮೂರ್ತಿಗಳು. ಇವು ಕಿರು ಗಾತ್ರದ ಧಾನ್ಯಗಳ ಹೆಸರಾದರೂ ಹಂಪಿಯ ಈ ಎರಡು ಮೂರ್ತಿಗಳು ಬೃಹದಾಕಾರದವು. ಶೃಂಗೇರಿಯಲ್ಲಿ ಶಾರದಾ ದೇಗುಲದ ಮಗ್ಗುಲಲ್ಲಿಯೇ ಒಂದು ಗಣಪತಿ ದೇಗುಲ ಇದೆ. ಇದನ್ನು ಪರೀಕ್ಷೆ ಗಣಪತಿ ಎಂದು ಕರೆಯುವುದು ವಾಡಿಕೆ. ಈ ದೇಗುಲ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. ಉಳಿದಂತೆ ವಿದ್ಯಾರ್ಥಿಗಳು ಇಲ್ಲಿನ ಮುಚ್ಚಿದ ಬಾಗಿಲ ಮುಂದೆ ನಿಂತು ತಮ್ಮ ಬೇಡಿಕೆ ಸಲ್ಲಿಸುತ್ತಾರೆ, ಆನಂತರ ಹರಕೆ ತೀರಿಸುತ್ತಾರೆ.
ನಮ್ಮ ರಾಜ್ಯದಲ್ಲಿ ಬಹುಖ್ಯಾತಿ ಹೊಂದಿದ ಹಲವು ಗಣಪತಿ ದೇಗುಲಗಳಲ್ಲಿ ಪ್ರಮುಖ ಎನಿಸಿದ್ದು ಬೆಂಗಳೂರಿನ ದೊಡ್ಡ ಗಣೇಶ, ಗೋಕರ್ಣದ ಗಣಪತಿ, ಇಡಗುಂಜಿ ಮತ್ತು ಶರವು ಮಹಾ ಗಣಪತಿ ದೇಗುಲಗಳು. ಬೆಂಗಳೂರಲ್ಲಿಯೇ ಟ್ರಾಫಿಕ್ ಗಣೇಶ ಎಂಬ ದೇಗುಲವೂ ಇರುವುದು ವಿಶೇಷ. ಇದಕ್ಕಿಂತ ರೋಚಕ ಎನಿಸುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಇರುವ ಬಯಲು ಗಣಪತಿ. ಬೃಹತ್ ಗಾತ್ರದ ಈ ಗಣಪತಿಗೆ ಮುಖ್ಯ ಹರಕೆ ಎಂದರೆ ಕಡುಬಿನ ಹಾರ ಸಮರ್ಪಿಸುವುದು. ಅದೇಕೋ ಕರಾವಳಿ ಭಾಗದಲ್ಲಿಯೇ ಹೆಚ್ಚು ಗಣಪತಿ ದೇಗುಲಗಳು ಕಾಣಬರುತ್ತವೆ. ಬಹುಶ: ಸಂಪ್ರದಾಯ, ಮಡಿವಂತಿಕೆ ಪಾಲನೆಯಲ್ಲಿ ಅಲ್ಲಿನ ಜನ ಹೆಚ್ಚು ನಿಷ್ಠರು ಎನ್ನುವ ಕಾರಣಕ್ಕೆ ಇರಬಹುದು.
ಸ್ವಾತಂತ್ರ್ಯ ಚಳವಳಿ ಅಂಗವಾಗಿ ಲೋಕಮಾನ್ಯ ತಿಲಕರು ಕಲ್ಪಿಸಿದ ಗಣೇಶೋತ್ಸವ ನಾಡಿನಾದ್ಯಂತ ವ್ಯಾಪಿಸಿದೆ. ಪುಣೆಯ ದಗಡು ಶೇಠ ಗಣಪತಿ ಇಂದಿಗೂ ಅದೇ ಜನಪ್ರಿಯತೆ ಪಡೆದಿದ್ದಾನೆ. ಗಣೇಶೋತ್ಸವ ಸಂದರ್ಭದಲ್ಲಿ ಮುಂಬಯಿಯ ಸಿದ್ಧಿ ವಿನಾಯಕ ದೇಗುಲ ಬಿಟ್ಟರೆ ಅತಿ ಹೆಚ್ಚು ಭಕ್ತರನ್ನು ಆಕರ್ಷಿಸುವ ದೇವರು ದಗಡು ಶೇಠ ಗಣಪತಿ. ಮುಂಬಯಿಯ ಸಿದ್ಧಿ ವಿನಾಯಕನಿಗೆ ಸಲ್ಲುವ ಹರಕೆ ಎಂದರೆ ಬರಿಗಾಲಲ್ಲಿ ಅಲ್ಲಿಗೆ ನಡೆದು ಹೋಗಿ ಪೂಜೆ ಸಲ್ಲಿಸುವುದು. ಖ್ಯಾತ ಸಿನೆಮಾ ನಟರು, ಗಣ್ಯರು ಈಗಲೂ ಕೂಡ ಇಂಥ ವ್ರತ ಪಾಲನೆ ಮಾಡುತ್ತಾರೆ. ಅದು ಬಹಳ ದೊಡ್ಡ ಸುದ್ದಿ ಕೂಡ ಆಗುತ್ತದೆ.
ಗಣೇಶ ಚತುರ್ಥಿ ಸಮಯಕ್ಕೆ ಪ್ರತಿ ಊರಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಬಯಲುಗಳಲ್ಲಿ ಗಣೇಶ ಕೂರಿಸುವುದು ಸಾಮಾನ್ಯ. ಈಗಂತೂ ಬೆಳಗಾವಿಯಂಥ ನಗರಗಳಲ್ಲಿ ಕೆಲವು ಗಣಪತಿ ಪೆಂಡಾಲುಗಳಿಗೆ ಭೇಟಿ ನೀಡುವ ಭಕ್ತರಿಗೆ ಪ್ರಸಾದ ದಯಪಾಲಿಸುವ ವ್ಯವಸ್ಥೆ ಇರುತ್ತದೆ. ಆದರೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರತಿಷ್ಠೆಯ ಗಣೇಶನನ್ನು ಕೂರಿಸುವುದು ತುಮಕೂರು ಸಮೀಪದ ಗೂಳೂರಿನಲ್ಲಿ. ಗಣೇಶ ಚತುರ್ಥಿಯ ದಿನ ಮಣ್ಣು ಕಲೆಸುವುದು ಆರಂಭ ಆಗುತ್ತದೆ. ಮಂಟಪದ ಒಳಗೇ ಸೂರಿನ ಎತ್ತರದ ವರೆಗೆ ಮೂಡಿ ನಿಲ್ಲುವ ಈ ಮಹಾ ಗಾತ್ರದ ಗಣಪತಿ ನಿರ್ಮಿಸುವುದು ಮತ್ತು ಆನಂತರ ಅದನ್ನು ಹೊರತಂದು ವಿಸರ್ಜಿಸುವುದು ಬಹುದೊಡ್ಡ ವಿಸ್ಮಯಗಳಲ್ಲಿ ಒಂದು. ಇದನ್ನು ಬಿಟ್ಟರೆ ಅರಸೀಕೆರೆಯಲ್ಲಿ ಇರಿಸುವ ಗಣೇಶೋತ್ಸವದ ಮೂರ್ತಿ ಬಹಳ ಜನಪ್ರಿಯ. ಅಲ್ಲಿ ದೀರ್ಘ ಕಾಲದವರೆಗೆ ಸಂಜೆ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲುವುದೇ ಸುದೈವ ಎಂದು ಕಲಾವಿದರು ಭಾವಿಸುತ್ತಾರೆ.
ನಮಗೆ ಜಾತ್ರೆ, ರಥೋತ್ಸವ, ಪರಿಷೆ ಎಂದರೆ ಎಲ್ಲಿಲ್ಲದ ಸಡಗರ. ಪ್ರತಿ ಊರಲ್ಲಿ ಒಂದಲ್ಲ ಒಂದು ದೇವರ ಉತ್ಸವ ಇದ್ದೇ ಇರುತ್ತದೆ. ಅದರಲ್ಲೂ ಕೆಲವು ದೇವರುಗಳ ಉತ್ಸವ, ಜಾತ್ರೆಗಳಿಗೆ ನಿರ್ದಿಷ್ಟ ಗುಂಪಿನ ಜನ ಸೇರುತ್ತಾರೆ. ಗಣೇಶ ಉತ್ಸವ ಹಾಗಲ್ಲ; ಅಲ್ಲಿ ಎಲ್ಲ ಬಗೆಯ ಜನರ ಪಾಲ್ಗೊಳ್ಳುವಿಕೆ ಇರುವುದರಿಂದಲೇ ಗಣೇಶೋತ್ಸವಗಳಿಗೆ ಹೆಚ್ಚು ಮೆರುಗು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಜೆಯಾದರೆ ಮನೆ ಮಂದಿಯೆಲ್ಲ ಸೇರಿ ಗಣೇಶ ಉತ್ಸವದ ಮಂಟಪಗಳಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ ಸಂಗತಿ. ಭಾದ್ರಪದ ಶುಕ್ಲ ಚೌತಿಯಂದು ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯನ್ನು ಅನಂತ ಚತುರ್ದಶಿ ಅಥವಾ ಅನಂತ ಹುಣ್ಣಿಮೆ ದಿನ ವಿಸರ್ಜಿಸುವುದು ಸಂಪ್ರದಾಯ. ಇದನ್ನು ಮುಂಬಯಿ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಹಲವಾರು ವರ್ಷಗಳಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಬೇರೆ ಬೇರೆ ಊರುಗಳಲ್ಲಿ ತಮಗೆ ಸೂಕ್ತ ಎನಿಸುವಷ್ಟು ಕಾಲ ಗಣೇಶನನ್ನು ಕೂರಿಸಿ, ಪೂಜಿಸಿ, ಹಾಡಿ, ನಲಿದು ಆನಂತರ ವಿಸರ್ಜಿಸುವುದು ಕೂಡ ಇದೆ.
ಒಟ್ಟಾರೆ ಗಣಪತಿ ಎಲ್ಲರ ದೇವರು ಮತ್ತು ಎಲ್ಲರಿಗೂ ಎಲ್ಲ ಕಾಲಕ್ಕೂ ಪ್ರಿಯ ಎನಿಸುವ, ಬಹಳಷ್ಟು ಸಲ ಚೇಷ್ಟೆಗೆ ಕೂಡ ಗುರಿ ಆಗಬಲ್ಲ ದೇವರು. ಅವನು ಹಾಸ್ಯ ಪ್ರಿಯ. ಗಣೇಶ ಮೂರ್ತಿಯನ್ನು ಮನೆ ಅಥವಾ ಗುಡಿಗಳಲ್ಲಿ ಪೂಜೆಗೆ ಬಳಸುವಾಗ, ಅದಕ್ಕೊಂದು ಪ್ರಮಾಣ ಮತ್ತು ಆಕೃತಿ ನಿಗದಿ ಮಾಡಲಾಗಿದೆ. ಆದರೆ ಉತ್ಸವಗಳಲ್ಲಿ ಬಳಸುವ ಗಣಪತಿ ಮೂರ್ತಿ ಅವರವರ ಇಷ್ಟದ ಆಕಾರ ಪಡೆಯುತ್ತಾನೆ. ಕೆಲವೊಮ್ಮೆ ಸೈನಿಕನಾಗಿ, ಕೆಲವೊಮ್ಮೆ ರೈತನಾಗಿ, ಕೆಲವೊಮ್ಮೆ ರಾಜಕಾರಣಿಯಾಗಿ ಶೋಭಿಸುತ್ತಾನೆ. ಆತ ಬಹಳಷ್ಟು ಉದಾರಿ ಕೂಡ. ಇಂಥ ಗಣಪ ನಮ್ಮನೆಲ್ಲ ಕಾಯಲಿ, ಮುಖ್ಯವಾಗಿ ನಮಗೆಲ್ಲ ಸದ್ಬುದ್ಧಿ ನೀಡಲಿ ಎಂದು ಎಲ್ಲರೂ ಬೇಡಿಕೊಳ್ಳೋಣ.
-ಎ.ಬಿ.ಧಾರವಾಡಕರ