ಗೋಕಾಕ ಜು ೨೭ : ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಸತತ ಮಹಾಮಳೆಯ ಪರಿಣಾಮ ಗೋಕಾಕ ನಗರದಲ್ಲಿ ಜಲಕಂಟಕ ಎದುರಾಗಿದೆ. ನಗರದಲ್ಲಿ ಹರಿಯುವ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳಿಗೆ ಮಹಾಪೂರ ಬಂದು ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಲೋಳಸೂರ ಮತ್ತು ಚಿಕ್ಕೋಳಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿ, ಸಂಚಾರ ಸಂಪೂರ್ಣ ಬಂದ್ ಆಗಿದೆ.
ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮ ಸ್ಥಾನವಾದ ಗೋಕಾಕದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಧ್ಯಾಹ್ನ ೧೨ ಘಂಟೆಯ ವೇಳೆಗೆ ಹಿಡಕಲ್ ಜಲಾಶಯದಿಂದ ೪೪ ಸಾವಿರ ಕ್ಯೂಸೆಕ್ಸ, ಹಿರಣ್ಯಕೇಶಿ ನದಿಯಿಂದ ೨೪ ಸಾವಿರ ಕ್ಯೂಸೆಕ್ಸ, ಶಿರೂರು ಜಲಾಶಯ (ಮಾರ್ಕಂಡೇಯ) ೮ ಸಾವಿರ ಕ್ಯೂಸೆಕ್ಸ ಹಾಗೂ ಬಳ್ಳಾರಿ ನಾಲಾದಿಂದ ೩ ಸಾವಿರ ಕ್ಯೂಸೆಕ್ಸ ಒಟ್ಟು ೭೯ ಸಾವಿರ ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿರುವ ಪರಿಣಾಮ ನಗರದ ಹಳೆ ದನಗಳ ಪೇಟೆ, ಡೋರ ಓಣಿ, ದಾಳಂಬ್ರಿ ತೋಟ್, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗಾರ ಓಣಿ, ಕುಂಬಾರ ಓಣಿ ಸೇರಿದಂತೆ ಅನೇಕ ಕಡೆಗಳಲ್ಲಿ ನದಿ ನೀರು ನುಗ್ಗಿದ್ದು, ಈ ಪ್ರದೇಶಗಳಲ್ಲಿ ವಾಸಿಸುವ ಜನರು ಅವಶ್ಯಕ ಸಾಮಗ್ರಿಗಳನ್ನು ತಗೆದುಕೊಂಡು ತಾಲೂಕಾ ಆಡಳಿತ ವತಿಯಿಂದ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಬೆಳಗಾವಿ ನಂತರದ ಅತೀದೊಡ್ಡ ನಗರ ಗೋಕಾಕದ ೩೦೦ಕ್ಕೂ ಹೆಚ್ಚು ಮನೆಗಳು, ೧೫೦ಕ್ಕೂ ಹೆಚ್ಚು ಅಂಗಡಿಗಳು ಮುಳುಗಡೆಯಾಗಿದ್ದು ಮಾರುಕಟ್ಟೆ, ಅಂಗಡಿಗಳು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಮನೆಗಳು, ಅಂಗಡಿಗಳು, ಬೇಕರಿ, ಗ್ಯಾರೇಜಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ. ರಾತ್ರೋರಾತ್ರಿ ಜನರು ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಅಂಗಡಿಗಳಲ್ಲಿನ ಸಾಮಗ್ರಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಘಟಪ್ರಭಾ ನದಿ ಆರ್ಭಟಕ್ಕೆ ಗೋಕಾಕ ಜನತೆ ತತ್ತರಿಸಿ ಹೋಗಿದ್ದಾರೆ.
ಕಾಳಜಿ ಕೇಂದ್ರದ ಮೋರೆ ಹೋದ ಜನರು :
ಪ್ರವಾಹ ಪೀಡತ ಪ್ರದೇಶದ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ತಾಲೂಕು ಆಡಳಿತ ವತಿಯಿಂದ ನಗರದಲ್ಲಿ ಸದ್ಯದ ಮಟ್ಟಿಗೆ ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತ್ತು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರಲಾಗಿದ್ದು, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಧ್ಯಾಹ್ನದ ವೇಳೆಗೆ ೧೧೦ ಕುಟುಂಬಗಳ ೪೦೦ ಜನರು ಆಶ್ರಯ ಪಡೆದಿದ್ದರು. ಎಪಿಎಂಸಿಯಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರದಲ್ಲಿ ೪೫ ಕುಟುಂಬದ ಒಟ್ಟು ೧೫೦ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಆಶ್ರಯ ಕೇಂದ್ರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, ಶಿಕ್ಷಣ ಇಲಾಖೆಯ ಮಧ್ಯಾಹ್ನ ಬಿಸಿಯೂಟದ ಸಿಬ್ಬಂದಿ ರುಚಿಕರವಾದ ಭೋಜನವನ್ನು ತಯಾರಿಸಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ಬಡಿಸುತ್ತಿದ್ದಾರೆ.
ಅಸ್ತವ್ಯಸ್ತವಾಗಿರುವ ಎಪಿಎಂಸಿ ಕಾಳಜಿ ಕೇಂದ್ರ :
ನಗರದಲ್ಲಿ ತಾಲೂಕು ಆಡಳಿತದ ವತಿಯಿಂದ ತೆರೆಯಲಾಗಿರುವ ಎಪಿಎಂಸಿಯ ಕಾಳಜಿ ಕೇಂದ್ರದಲ್ಲಿ ಜನರು ಹೆಸರು ನೋಂದಾಣಿಯಿಸಿಕೊಂಡಿದ್ದಾರೆ. ಆದರೆ ಅವರಿಗೆ ವಾಸವಾಗಿರಲು ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿಲ್ಲದ ಪರಿಣಾಮ ನಿರಾಶ್ರಿತರು ಎಂಪಿಎಂಸಿಯಲ್ಲಿರುವ ವರ್ತಕರ ಅಂಗಡಿಗಳ ಮುಂದೆ ತಮ್ಮ ದಿನಬಳಕೆಯ ಅವಶ್ಯಕ ಸಾಮಾನುಗಳೊಂದಿಗೆ ಬಿಡಾರು ಹೂಡಿದ್ದಾರೆ. ತಹಶೀಲ್ದಾರ ಡಾ.ಮೋಹನ ಭಸ್ಮೆ ಅವರು ಇತ್ತಕಡೆ ಗಮನ ಹರಿಸಿ ಅವರಿಗೆ ವಾಸಿಸಲು ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಂಡಬೇಕು ಎಂದು ಎಪಿಎಂಸಿ ಕಾಳಜಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಕೊಂಡವರು ನಿರಾಶ್ರಿತರ ಆಗ್ರಹವಾಗಿದೆ.
ಕಳೆದ ಹಲವು ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ಎಪಿಎಂಸಿಯಲ್ಲಿ ಕಾಳಜಿ ಕೇಂದ್ರಕ್ಕೆಂದೇ ಗುರುತಿಸಲಾಗಿರುವ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಹಲವು ಕಡೆ ಸ್ಲ್ಯಾಬ್ ಒಡೆದು ಬೀಳುತ್ತಿದ್ದೆ. ಇದರ ಪರಿಣಾಮ ಅಲ್ಲಿ ವಾಸಿಸಲು ಜನರು ಹಿಂದೆಟ್ಟು ಹಾಕುತ್ತಿದ್ದಾರೆ. ಎಂಪಿಎಂಸಿಯಲ್ಲಿರುವ ಸುವ್ಯವಸ್ಥಿತ ಕಟ್ಟಡದಲ್ಲಿ ನಿರಾಶ್ರಿತರಿಗೆ ವಾಸಿಸಲು ಅನುವು ಮಾಡಿಕೊಡಬೇಕು ಎಂಬ ಆಗ್ರಹ ಅಲ್ಲಿ ಹೆಸರು ನೋಂದಾಯಿಸಿಕೊಂಡ ಜನರದ್ದಾಗಿದೆ.
ಜಾನುವಾರುಗಳಿಗೆ ಪಶು ಇಲಾಖೆಯಿಂದ ಲಸಿಕೆ :
ಪ್ರವಾಹ ಪೀಡಿತ ಪ್ರದೇಶದ ಜನರು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಎಂಪಿಎಂಸಿಯಲ್ಲಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರೆ, ಜಾನುವಾರುಗಳ ಆಶ್ರಯಕ್ಕೆ ಮತ್ತು ಅವರ ಆರೋಗ್ಯ ಚಿಕಿತ್ಸೆಗೂ ಸಹ ತಾಲೂಕಾ ಆಡಳಿತ ಮತ್ತು ಪಶು ಸಂಗೋಪಣಾ ಇಲಾಖೆಯಿಂದ ಅವಶ್ಯಕ ಕ್ರಮಗಳನ್ನು ಕೈಗೊಂಡಿದೆ. ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಅವರು ದನಕರುಗಳಿಗೆ ಗಂಟಲು ಬೇನೆ ಬರದಂತೆ ಲಸಿಕೆ ನೀಡಿ ದನಕರುಗಳ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಜನರನ್ನು ಚದುರಿಸಲು ಪೊಲೀಸರ ಹರಸಾಹಸ :
ನಗರದಲ್ಲಿ ನೀರು ನುಗ್ಗಿ, ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಮತ್ತು ಚಿಕ್ಕೋಳಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಮುಳುಗಡೆಯಾಗಿರುವ ಸೇತುವೆಗಳನ್ನು ಮತ್ತು ನದಿಗಳ ಮಹಾಪೂರ ನೋಡಲು ಜನರು ತಂಡೋಪತಂಡವಾಗಿ ಬರುತ್ತಿರುವ ಪರಿಣಾಮ ಅವರನ್ನು ನದಿಗಳ ದಡದಲ್ಲಿ ತೆರಳದಂತೆ ಚುದುರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಪಿಎಸ್ ಐ ಕೆ.ವಾಲಿಕರ ಅವರ ನೇತೃತ್ವದಲ್ಲಿ ನಗರದ ನದಿ ತೀರದ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ ಕೈಗೊಳ್ಳಲಾಗಿದೆ.
ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯನಿರ್ವಹಣೆ :
ಗೋಕಾಕ ನಗರ ಭಾಗಶಃ ಪ್ರವಾಹ ಪೀಡಿತವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಜಿಲ್ಲಾಡಳಿತ ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ದೃಶ್ಯಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಂಡು ಬರುತ್ತಿವೆ. ಪಿಎಸ್ ಐ ಕೆ.ವಾಲಿಕರ ಮತ್ತು ತಂಡ, ನಗರಸಭೆಯ ಪೌರಾಯುಕ್ತ ರಮೇಶ ಜಾಧವ, ಎಂ.ಎಚ್.ಗಜಾಕೋಶ, ಜಯೇಶ ತಾಂಬೂಳೆ, ಎಇಇ ಪಾಟೀಲ, ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಮತ್ತು ತಂಡ, ಹೆಸ್ಕಾಂ ಇಲಾಖೆಯ ಎಸ್.ಪಿ.ವರಾಳೆ , ಎಸ್.ಓ ಶ್ರೀಧರ ಯಲಿಗಾರ ಮತ್ತು ತಂಡ, ಆರೋಗ್ಯ ಇಲಾಖೆಯ ಡಾ.ಎಂ.ಎಸ್.ಕೊಪ್ಪದ ಮತ್ತು ತಂಡ, ಶಿಕ್ಷಣ ಇಲಾಖೆಯ ಸಿ.ಆರ್.ಪಿ , ಬಿ,ಆರ್.ಸಿ ಮತ್ತು ಶಿಕ್ಷಕರ ತಂಡಗಳು ಪ್ರವಾಹದಿಂದ ನಿರಾಶ್ರಿತರ ಆಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಜನರ ಮತ್ತು ಜಾನುವಾರುಗಳ ಸಂರಕ್ಷಣೆಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆ.
ಪ್ರವಾಹದಿಂದ ಮುಳುಗಡೆಯಾಗಿರುವ ನಗರದ ಚಿಕ್ಕೋಳಿ ಸೇತುವೆ ಸ್ಥಳಕ್ಕೆ ತಹಶೀಲ್ದಾರ ಡಾ.ಮೋಹನ ಭಸ್ಮೆ , ಮಾಜಿ ಜಿಪಂ ಸದಸ್ಯ ಟಿ.ಆರ್.ಕಾಗಲ್, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಸನದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.