This is the title of the web page

ಕುಖ್ಯಾತ ಅಪರಾಧಿಗೆ ಗುಂಡೇಟು

ಬೆಂಗಳೂರು, 11- ಮಾಜಿ ಸಚಿವ ವರ್ತೂರು ಪ್ರಕಾಶ ಅವರ ಅಪಹರಣ ಪ್ರಕರಣ ಸೇರಿದಂತೆ ಹಲವಾರು ಅಪರಾಧಗಳ ಆರೋಪಿ ಲೋಹಿತ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಕೊಲೆ, ಅಪಹರಣ ಸೇರಿದಂತೆ 17 ಪ್ರಕರಣದಲ್ಲಿ ಬೇಕಾಗಿದ್ದ ಆತನ ಬಂಧನಕ್ಕೆ ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಲೆ ಮರೆಸಿಕೊಂಡಿದ್ದ ಲೋಹಿತ್ ಪತ್ತೆಗೆ ಹಲಸೂರು ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಶನಿವಾರ ಅವನು ಜೀವನ ಭೀಮಾನಗರ ಕಡೆಗೆ ಬರುವ ಮಾಹಿತಿ ಪ್ರಕಾರ ಬೆಳಿಗ್ಗೆ ಪೊಲೀಸರು ಆತನ ಬೆನ್ನತ್ತಿ ಬಂಧಿಸಲು ಹೋಗಿದ್ದ ವೇಳೆ ಹೆಡ್‌ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಆರೋಪಿ ಕಾಲಿಗೆ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.

ಲೋಹಿತ್ ಬಳಿ ಇನ್ನೊವಾ ಕಾರು ಸಹ ಪತ್ತೆಯಾಗಿದ್ದು ಇದನ್ನು ಆಂಧ್ರಪ್ರದೇಶದಲ್ಲಿ ಬಾಡಿಗೆಗೆ ಪಡೆದು ಅದರ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕಳ್ಳತನ ಮಾಡಿ ಅದೇ ಕಾರಿನಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ.

ಆಟೋ ಚಾಲಕ ವಿಜಯ ಕುಮಾರ ಎಂಬಾತನ ಕಿಡ್ನಾಪ್ ಪ್ರಕರಣದಲ್ಲಿ ಸಹ ಲೋಹಿತ್ ಪ್ರಮುಖ ಆರೋಪಿಯಾಗಿದ್ದಾನೆ. ಈ ಬಗ್ಗೆ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತ ತಲೆಮರೆಸಿಕೊಂಡಿದ್ದ.

ಲೋಹಿತ್ ವಿರುದ್ಧ ಕೋಲಾರ, ಬೆಂಗಳೂರು ವ್ಯಾಪ್ತಿಯಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲಿಗೆ ಗುಂಡೇಟು ತಗುಲಿದ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

You might also like
Leave a comment