This is the title of the web page

ಚಿರತೆಯೊಂದಿಗೆ ಹೋರಾಡಿ ಮಗು ರಕ್ಷಿಸಿಕೊಂಡು ಬಂದ ಮಹಾತಾಯಿ

ಭೋಪಾಲ, 1- ಬುಡಕಟ್ಟು ಮಹಿಳೆಯೊಬ್ಬಳು ಅಗಾಧ ಧೈರ್ಯ ಪ್ರದರ್ಶಿಸಿ ಚಿರತೆಯೊಂದಿಗೆ ಹೋರಾಡಿ ಚಿರತೆ ಬಾಯಿಂದ ತನ್ನ ಮಗುವನ್ನು ರಕ್ಷಿಸಿಕೊಂಡು ಬಂದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಚಿರತೆ ಬಂದು ಏಕಾಏಕಿ ತನ್ನ ಮಗನನ್ನು ಕೊಂಡೊಯ್ದಾಗ ಮಹಿಳೆ ಹೆದರಲಿಲ್ಲ, ಬದಲಾಗಿ ಅವಳು ತನ್ನ ಇತರ ಮಕ್ಕಳನ್ನು ತನ್ನ ಗುಡಿಸಲಿನೊಳಗೆ ಕೂಡಿಹಾಕಿ, ತನ್ನ ಎಂಟು ವರ್ಷದ ಮಗನನ್ನು ಚಿರತೆ ಹೊತ್ತೊಯ್ದ ಕಡೆ ಓಡಿದ್ದಾಳೆ. ನಂತರ ಚಿರತೆಯೊಂದಿಗೆ ಹೋರಾಡಿ ತನ್ನ ಮಗನನ್ನು ರಕ್ಷಿಸಿಕೊಂಡಿದ್ದಾಳೆ.

ಚಿರತೆ ದಾಳಿಯಿಂದ ಮಗು ಗಾಯಗೊಂಡಿದೆ ಮತ್ತು ಮಹಿಳೆಗೂ ಗಾಯಗಳಾಗಿವೆ. ಆದರೆ ಅವಳು ತನ್ನ ಮಗನೊಂದಿಗೆ ಜೀವಂತವಾಗಿ ಮರಳುವಲ್ಲಿ ಯಶಸ್ವಿಯಾಗಿದ್ದಾಳೆ.

ಮಹಿಳೆಯ ಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಾಜ್ಯ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಶ್ಲಾಘಿಸಿದ್ದಾರೆ.

ಘಟನೆಯ ವಿವರ :

ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ 500 ಕಿಮಿ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ ಟೈಗರ್ ರಿಸರ್ವ್‌ನ ಬಫರ್ ವಲಯದಲ್ಲಿರುವ ಬಾಡಿ ಝರಿಯಾ ಗ್ರಾಮದಲ್ಲಿ ರವಿವಾರ ರಾತ್ರಿ ಈ ಘಟನೆ ನಡೆದಿದೆ.

ಕಿರಣ ಎಂಬ ಬೈಗಾ ಬುಡಕಟ್ಟು ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ತಮ್ಮ ಗುಡಿಸಲಿನ ಬಳಿ ಬೆಂಕಿ ಕಾಯಿಸುತ್ತ ಕುಳಿತಿದ್ದಳು. ಇದ್ದಕ್ಕಿದ್ದಂತೆ, ಚಿರತೆಯೊಂದು ಕಾಣಿಸಿಕೊಂಡು ಆಕೆಯ ಮಗ ರಾಹುಲನನ್ನು ಕಚ್ಚಿಕೊಂಡು ಓಡಿಹೋಗಿದೆ.
ಈ ಹಠಾತ್‌ ಘಟನೆಯಿಂದ ಮಹಿಳೆ ಆಘಾತಕ್ಕೊಳಗಾದರೂ ಆಕೆ ಹೆದರದೇ ತನ್ನ ಇತರ ಇಬ್ಬರು ಮಕ್ಕಳನ್ನು ಗುಡಿಸಲಿನೊಳಗೆ ಕೂಡಿಹಾಕಿ ತಕ್ಷಣವೇ ಚಿರತೆಯ ಬೆನ್ನತ್ತಿ ಕಾಡಿನ ಕಡೆಗೆ ಧಾವಿಸಿದ್ದಾಳೆ. ಅಲ್ಲಿ ಚಿರತೆ ತನ್ನ ಮಗನನ್ನು ಬಾಯಲ್ಲಿ ಕಚ್ಚಿಕೊಂಡು ಸುಮಾರು ಒಂದು ಕಿಲೋಮೀಟರ್ ದೂರ ಹೋಗಿದೆ. ಆದರೂ ಆಕೆ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದ್ದಾಳೆ. ನಂತರ ಚಿರತೆ ಮಗುವಿನೊಂದಿಗೆ ಪೊದೆಗಳಲ್ಲಿ ಅಡಗಿಕೊಂಡಾಗ ಆಕೆ ಬಡಿಗೆಯಿಂದ ಹಲ್ಲೆ ಮಾಡಿ ಚಿರತೆಯನ್ನು ಓಡಿಸಲು ಪ್ರಯತ್ನಿಸುತ್ತಲೇ ಮತ್ತು ಮಗುವಿಗೆ ಅಪಾಯವಾಗದಂತೆ ಎಚ್ಚರಿಕೆಯನ್ನೂ ವಹಿಸಿದ್ದಾಳೆ. ಕೊನೆಗೂ ಬಡಿಗೆ ಹಿಡಿದ ಮಹಿಳೆಯ ಆವೇಶಕ್ಕೆ ಹೆದರಿದ ಚಿರತೆ ಮಗುವನ್ನು ಬಿಟ್ಟು ಓಡಿದೆ.

ಆಗ ಕಿರಣ ತನ್ನ ಮಗನನ್ನು ಕರೆದುಕೊಂಡು ಬರುತ್ತಿರುವಾಗಲೂ ಚಿರತೆ ಮತ್ತೆ ಅವಳ ಮೇಲೆ ದಾಳಿ ಮಾಡಿದೆ. ಆದರೆ, ಅವಳು ಶೌರ್ಯದಿಂದ ಚಿರತೆಯನ್ನು ಸೋಲಿಸಿದಳು ಎಂದು ಅರಣ್ಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಈ ಮಧ್ಯೆ, ವಿಷಯ ಗೊತ್ತಾಗಿ ಮಹಿಳೆಯ ನೆರವಿಗೆ ಇತರ ಗ್ರಾಮಸ್ಥರು ಕೂಡ ಸ್ಥಳಕ್ಕೆ ಆಗಮಿಸಿದರು. ಆಗ ಚಿರತೆ ಕಾಡಿನಲ್ಲಿ ಕಣ್ಮರೆಯಾಯಿತು. ಚಿರತೆ ದಾಳಿಯಿಂದ ಬಾಲಕನ ಬೆನ್ನು, ಕೆನ್ನೆ ಮತ್ತು ಕಣ್ಣುಗಳಿಗೆ ಗಾಯಗಳಾಗಿದ್ದು, ತಾಯಿಯೂ ಗಾಯಗೊಂಡಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

You might also like
Leave a comment