This is the title of the web page

ತಾಜಮಹಲ್ ಕುರಿತ ಅರ್ಜಿ ವಜಾಗೊಳಿಸಿದ ಹೈಕೋರ್ಟ

ಲಖನೌ, ಮೇ.12- ತಾಜಮಹಲ್‌ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ ಹೈಕೋರ್ಟನ ಲಖನೌ ಪೀಠವು ವಜಾಗೊಳಿಸಿದ್ದು ಅರ್ಜಿದಾರನನ್ನು. ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಹಿಂದೂ ದೇವತೆಗಳ ವಿಗ್ರಹಗಳ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಜಮಹಲ್‍ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಡಾ ರಜನೀಶ ಸಿಂಗ್ ಅಲಹಾಬಾದ ಹೈಕೋರ್ಟಗೆ ಮನವಿ ಸಲ್ಲಿಸಿದ್ದರು.

ಹಿಂದೂ ದೇವತೆಗಳ ವಿಗ್ರಹಗಳನ್ನು ಮುಚ್ಚಿದ ಬಾಗಿಲುಗಳ ಹಿಂದೆ ಇರಿಸಿ ಬೀಗ ಹಾಕಲಾಗಿದೆ. ತಾಜಮಹಲ್ ಶಿವ ದೇವಾಲಯವಾಗಿತ್ತು. ಇದೀಗ ಮುಚ್ಚಿರುವ 22 ಕೊಠಡಿಗಳನ್ನು ತೆರೆಯಲು ಅವಕಾಶ ಕೊಡಬೇಕು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಅಲಹಾಬಾದ್‍ನ ದ್ವಿಸದಸ್ಯ ಪೀಠ ಇದೀಗ ತಾಜಮಹಲ್ ಬಗ್ಗೆ ಪ್ರಶ್ನೆ ಎತ್ತಿದ್ದೀರಿ ಮುಂದೊಂದು ದಿನ ಹೈಕೋರ್ಟ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ ಎಂದು ಛೀಮಾರಿ ಹಾಕಿ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದೆ.

ವಿಚಾರಣೆ ವೇಳೆ ಸತ್ಯಶೋಧನಾ ಸಮಿತಿ ರಚನೆಯ ಬೇಡಿಕೆಯ ಔಚಿತ್ಯವನ್ನು ಪ್ರಶ್ನಿಸಿದ ಹೈಕೋರ್ಟ, ಸಮಿತಿಯನ್ನು ರಚಿಸುವ ಮೂಲಕ ನೀವು ಏನು ತಿಳಿದುಕೊಳ್ಳಲು ಬಯಸುತ್ತೀರಿ ಎಂದು ಅರ್ಜಿದಾರರನ್ನು ಕೇಳಿದೆ. ಅರ್ಜಿಯು ಸರಿಯಾದ ಮತ್ತು ನ್ಯಾಯಾಂಗ ಸಮಸ್ಯೆಗಳನ್ನು ಆಧರಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ ಅವರ ವಿಭಾಗೀಯ ಪೀಠವು ತಾಜಮಹಲ್ ಕುರಿತು ಸಲ್ಲಿಸಲಾದ ವಿವಾದದ ವಿಚಾರಣೆಯ ಸಂದರ್ಭದಲ್ಲಿ, ನೀವು ಯಾವ ತೀರ್ಪುಗಳನ್ನು ತೋರಿಸುತ್ತಿದ್ದೀರಿ ಎಂದು ಅರ್ಜಿದಾರರನ್ನು ಕೇಳಿದರು. ಅರ್ಜಿದಾರರು ಹೈಕೋರ್ಟ ಮತ್ತು ಸುಪ್ರೀಮ ಕೋರ್ಟನ ಹಲವಾರು ತೀರ್ಪುಗಳನ್ನು ಮಂಡಿಸಿದರು, ಇದರಲ್ಲಿ 19 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ವಿಶೇಷವಾಗಿ ಆರಾಧನೆ, ಪೂಜೆ ಮತ್ತು ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯವನ್ನು ಉಲ್ಲೇಖಿಸಲಾಗಿದೆ.

ನಿಮ್ಮ ವಾದಗಳನ್ನು ನಾವು ಒಪ್ಪುವುದಿಲ್ಲ. ಈ ಅರ್ಜಿ ಸೂಕ್ತ ಮಾದರಿಯಲ್ಲಿಲ್ಲ. ಕೋಣೆಗಳನ್ನು ತೆರೆಯುವ ಕುರಿತು ಸಲ್ಲಿಸಿರುವ ಅರ್ಜಿಗೆ ಐತಿಹಾಸಿಕ ಸಂಶೋಧನೆಯಲ್ಲಿ ಸೂಕ್ತ ವಿಧಾನ ಅಳವಡಿಸಬೇಕು, ಐತಿಹಾಸಿಕ ಸಂಶೋಧನೆಯಲ್ಲಿ ಸೇರಿಸಬೇಕು, ಹಾಗಾಗಿ ನಾವು ಅಂತಹ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡ ಅಲಹಾಬಾದ ಹೈಕೋರ್ಟ, ತಾಜಮಹಲ್ ಕೊಠಡಿಗಳನ್ನು ತೆರೆಯಲು ಸಲ್ಲಿಸಿದ್ದ ಮನವಿಯನ್ನು ಕಸದ ಬುಟ್ಟಿಗೆ ಎಸೆಯುವಂತೆ ಹೇಳಿದೆ.

“ನಾಳೆ ನೀವು ಬಂದು ನಮ್ಮನ್ನು ಗೌರವಾನ್ವಿತ ನ್ಯಾಯಾಧೀಶರ ಚೇಂಬರ್‌ಗೆ ಹೋಗುವಂತೆ ಅನುಮತಿ ಕೇಳುತ್ತೀರಿ? ಪಿಐಎಲ್ ವ್ಯವಸ್ಥೆಯನ್ನು ಅಪಹಾಸ್ಯ ಮಾಡಬೇಡಿ” ಎಂದು ಹೇಳಿದೆ.

ನೀವು ಸಮಿತಿಯ ಮೂಲಕ ಸತ್ಯವನ್ನು ಕಂಡುಹಿಡಿಯಲು ಬಯಸುತ್ತಿದ್ದೀರಿ. ಆದರೆ, ಇದನ್ನು ಪ್ರಶ್ನೆ ಮಾಡೋಕೆ ನೀವು ಯಾರು. ಇದು ನಿಮ್ಮ ಹಕ್ಕಲ್ಲ. ಈ ವಿಷಯ ಆರ್ ಟಿಐ ವ್ಯಾಪ್ತಿಗೂ ಒಳಪಡುವುದಿಲ್ಲ. ನಾನು ನಿಮ್ಮ ವಾದವನ್ನು ಪುರಸ್ಕರಿಸುವುದಿಲ್ಲ ಎಂದು ಕೋರ್ಟ ಹೇಳಿದೆ.

ರಿಟ್ ಅರ್ಜಿಯನ್ನು ಪುರಸ್ಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಹಿಂದೆ ವಿಚಾರಣೆ ವೇಳೆ ಹೈಕೋರ್ಟ ಅರ್ಜಿದಾರರಿಗೆ ತೀವ್ರ ಛೀಮಾರಿ ಹಾಕಿದ್ದು, ಈ ವಿಚಾರವಾಗಿ ಸಂಶೋಧನೆ ಮಾಡಿ, ಇದಕ್ಕಾಗಿ ಎಂಎ, ಪಿಎಚ್ ಡಿ ಮಾಡಿ, ಇದನ್ನು ಮಾಡಲು ಯಾರೂ ನಿಮ್ಮನ್ನು ಬಿಡದಿದ್ದರೆ ನಮ್ಮ ಬಳಿಗೆ ಬನ್ನಿ ಎಂದು ಹೇಳಿತ್ತು.

ಈ ನಡುವೆ ಅರ್ಜಿದಾರರು, ಅಲಹಾಬಾದ ಹೈಕೋರ್ಟ್ ತೀರ್ಪನ್ನು ಸುಪ್ರೀಮ ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದ್ದಾರೆ. ಅರ್ಜಿದಾರರ ಪರ ವಕೀಲ ರುದ್ರ ವಿಕ್ರಮ ಸಿಂಗ್ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದು, ಸುಪ್ರೀಮ ಕೋರ್ಟಗೆ ಹೋಗುವ ಮುನ್ನ ಇತಿಹಾಸ ತಜ್ಞರು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿಯನ್ನು ಕಲೆಹಾಕುವುದಾಗಿ ಹೇಳಿದ್ದಾರೆ.

You might also like
Leave a comment