This is the title of the web page

ಕುವೆಂಪು ನಗರ ಟ್ರಿಪಲ್ ಮರ್ಡರ್ ಕೇಸ್ ಆರೋಪಿ ನಿರ್ದೋಷಿ ಎಂದ ಹೈಕೋರ್ಟ

 

ಧಾರವಾಡ/ ಬೆಳಗಾವಿ : 2015 ರಲ್ಲಿ ಬೆಳಗಾವಿಯ
ಕುವೆಂಪು ನಗರದ ಚಿಕ್ಕುಬಾಗನಲ್ಲಿ ನಡೆದ
ಮಹಿಳೆ ಹಾಗೂ ಇಬ್ಬರು ಪುಟ್ಟ ಮಕ್ಕಳ ಬರ್ಬರ ಕೊಲೆ ಪ್ರಕರಣದ ಆರೋಪಿ ಪ್ರವೀಣ ಭಟ್ ಅವರನ್ನು ಧಾರವಾಡದ ಹೈಕೋರ್ಟ ಪೀಠವು ನಿರ್ದೋಷಿ ಎಂದು ತೀರ್ಪು ನೀಡಿದೆ.

ಚಿಕ್ಕ ಮಕ್ಕಳ ಬರ್ಬರ ಹತ್ಯೆಯಿಂದ ದೇಶದಾದ್ಯಂತ ದೊಡ್ಡ ಸದ್ದು ಮಾಡಿದ್ದ ಈ ಭಯಾನಕ ತ್ರಿವಳಿ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಹೈಕೋರ್ಟ ದ್ವಿಸದಸ್ಯ ಪೀಠವು ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ನೀಡಿ, ಆರೋಪಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಜನರನ್ನು ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಂತಾಗಿದೆ.

2015ರ ಆಗಸ್ಟ 16ರಂದು ನಸುಕಿನ ಜಾವ ಇಲ್ಲಿನ ಕುವೆಂಪು ನಗರದ ಮನೆಯಲ್ಲಿ ತ್ರಿವಳಿ ಕೊಲೆ ನಡೆದಿತ್ತು. ಗೃಹಿಣಿ ರೀನಾ ಮಾಲಗತ್ತಿ, ಅವರ ಮಕ್ಕಳಾದ ಆದಿತ್ಯ ಹಾಗೂ ಸಾಹಿತ್ಯ ಅವರನ್ನು ಬೆಡ್ ರೂಮಿನಲ್ಲೇ ಕೊಲೆ ಮಾಡಲಾಗಿತ್ತು. ರೀನಾ ಅವರೂಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರವೀಣ ಭಟ್ ಈ ಕೊಲೆ ಮಾಡಿದ್ದಾಗಿ, ರೀನಾ ಅವರ ಸಹೋದರ ದೂರು ದಾಖಲಿಸಿದ್ದರು. ರೀನಾ ಅವರನ್ನು ಚಾಕುವಿನಿಂದ ಇರಿದು ಹಾಗು ಆ ದೃಶ್ಯ ನೋಡಿದ್ದ ಅವರ ಮಕ್ಕಳನ್ನು ನೀರು ತುಂಬಿದ್ದ ಬಕೆಟ್ ನಲ್ಲಿ ತಲೆ ಒತ್ತಿಹಿಡಿದು ಕೊಲೆಮಾಡಿದ ಆರೋಪ ಭಟ್ ಮೇಲಿತ್ತು.

ಪೊಲೀಸರು 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2018ರ ಏಪ್ರಿಲ್ 16ರಂದು ಪ್ರವೀಣ ಭಟ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಆದರೆ, ಈ ಆದೇಶವನ್ನು ತಡೆಹಿಡಿದ ಧಾರವಾಡ ಹೈಕೋರ್ಟ ಪೀಠವು, ಇದೇ ಜೂನ್ 21ರಂದು ಆರೋಪಿಯನ್ನು ಖುಲಾಸೆ ಮಾಡಿದೆ. ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಹಾಗೂ ಎಂ.ಜಿ.ಎಸ್ ಕಮಲ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

You might also like
Leave a comment