ಅಂಕೋಲಾ, ಜುಲೈ 16 : ಉತ್ತರ ಕನ್ನಡದಲ್ಲಿ ಭಾರಿ ಮಳೆಯ ಪರಿಣಾಮ ಮಂಗಳವಾರ ಅಂಕೋಲಾ ತಾಲೂಕಿನ ಶಿರೂರ ಬಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು 7 ಮಂದಿ ಗುಡ್ಡ ಕುಸಿತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ, ಜು.16ರಂದು ಭೀಕರ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಣ್ಣಿನಡಿಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ 15 ಮಂದಿಗೂ ಅಧಿಕ ಮಂದಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಕ್ಷಣಾ ತಂಡ ಶಾಂತಿ ನಾಯ್ಕ(37) ಎನ್ನುವವರ ಮೃತದೇಹವನ್ನು ಮಣ್ಣಿನಿಂದ ಹೊರಕ್ಕೆ ತೆಗೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿಯಲ್ಲಿ ನಿಂತಿರುವ ಅನೇಕ ವಾಹನಗಳಿಗೂ ಹಾನಿ ಉಂಟಾಗಿದ್ದು ಅಲ್ಲಿ ನಿಂತ್ತಿದ್ದ ಒಂದು ಗ್ಯಾಸ್ ಟ್ಯಾಂಕರ್ ಪಕ್ಕದಲ್ಲಿರುವ ಗಂಗಾವಳಿ ನದಿಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಅದರಲ್ಲಿದ್ದ ಚಾಲಕ ಕ್ಲೀನರ್ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಾರವಾರ ಗೋವಾ ಅಂಕೋಲಾದಿಂದ ಕೇರಳ, ಮಂಗಳೂರು, ಕುಮಟಾ ಮತ್ತಿತರ ಭಾಗಗಳಿಗೆ ತೆರಳುವವರು ಹೆದ್ದಾರಿಯಲ್ಲಿ ಕಾಲ ಕಳೆಯುವಂತಾಗಿದೆ.
ಚತುಷ್ಪಥ ಹೆದ್ದಾರಿಗಾಗಿ ಗುಡ್ಡವನ್ನು ಕೊರೆಯಲಾಗಿತ್ತು. ಈ ಗುಡ್ಡವು ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವುದರಿಂದ ಹೆದ್ದಾರಿಯ ತುಂಬಾ ಮಣ್ಣು ಕಲ್ಲುಗಳು ತುಂಬಿ ಸಂಚರಿಸಲು ಆಗದ ಹಾಗೆ ಮಾರ್ಪಟ್ಟಿದೆ.
ಈಗಾಗಲೇ ಅಂಕೋಲಾ ತಾಲೂಕು ಆಡಳಿತ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು ಮಣ್ಣಿನ ಅಡಿಯಲ್ಲಿ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆರವು ಮಾಡಲು 24 ಗಂಟೆಗೂ ಅಧಿಕ ಕಾಲ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ ಎನ್ನಲಾಗುತ್ತಿದ್ದು ಇನ್ನು ಕೂಡ ಗುಡ್ಡ ಕುಸಿತ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.