This is the title of the web page

ರಶಿಯಾ ಬೆಂಬಲಿಸಿ ಹಿಂದೂ ಸೇನೆಯ ಮೆರವಣಿಗೆ

ಹೊಸದಿಲ್ಲಿ, 7- ಹಿಂದೂ ಸೇನೆಯ ಕಾರ್ಯಕರ್ತರು ರವಿವಾರ ದಿಲ್ಲಿಯ ಹೃದಯಭಾಗವಾದ ಕೆನ್ನಾಟ್ ಪ್ಲೇಸ್‌ನಲ್ಲಿ ರಶಿಯಾ ದೇಶವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರು.

ಕೈಯಲ್ಲಿ ಭಾರತ ಮತ್ತು ರಶಿಯಾದ ಧ್ವಜಗಳನ್ನು ಹಿಡಿದು ‘ರಶಿಯಾ ತುಮ್ ಸಂಘರ್ಷ ಕರೋ, ಹಮ್ ತುಮ್ಹಾರೆ ಸಾಥ್ ಹೇ (ರಷ್ಯಾ, ನೀವು ಹೋರಾಡಿ, ನಾವು ನಿಮ್ಮೊಂದಿಗೆ ಇದ್ದೇವೆ)’, ‘ಭಾರತ್ ಮಾತಾ ಕಿ ಜೈ’, ‘ಭಾರತ್-ರಶಿಯಾ ದೋಸ್ತಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಈ ಸಂದರ್ಭದಲ್ಲಿ ಮಾತನಾಡಿ, “ವಿಶ್ವಸಂಸ್ಥೆಯಲ್ಲಿ ಭಾರತವು ರಶಿಯಾದ ಪರವಾಗಿ ಮತಚಲಾಯಿಸಬೇಕಿತ್ತು. ರಶಿಯಾ ಯಾವತ್ತೂ ನಮ್ಮ ನಾಗರಿಕರನ್ನು ರಕ್ಷಿಸಿದೆ ಎಂದು ಹೇಳಿದರು.

ಯಾವಾಗಲೂ ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ನಮ್ಮ ಪರಮಾಣು ಕಾರ್ಯಕ್ರಮದ ವಿರುದ್ಧ ಮತ ಚಲಾಯಿಸಿದ ಫ್ಯಾಸಿಸ್ಟ ಮತ್ತು ಜನಾಂಗೀಯವಾದಿ ಉಕ್ರೇನ್ ದೇಶದ ವಿರುದ್ಧ ನಾವು ರಶಿಯಾವನ್ನು ಬೆಂಬಲಿಸುತ್ತೇವೆ” ಎಂದು ಅವರು ಹೇಳಿದರು.

“ಯುದ್ಧ ಒಳ್ಳೆಯದಲ್ಲ, ಆದರೆ ನಾವು ಒಳ್ಳೆಯದು ಮತ್ತು ಉತ್ತಮವಾದವುಗಳ ನಡುವೆ ಆಯ್ಕೆ ಮಾಡಬೇಕಾಗುತ್ತೆ. ಅಂದರೆ ನಾವು ರಷ್ಯಾದ ಬೆಂಬಲಕ್ಕೆ ನಿಲ್ಲುತ್ತೇವೆ, ಏಕೆಂದರೆ ರಶಿಯಾ ಯಾವಾಗಲೂ ಭಾರತದ ನಿಜವಾದ ಸ್ನೇಹಿತ” ಎಂದು ಅವರು ಹೇಳಿದರು.

ಪ್ರತಿಭಟನೆಗೆ ಪೂರ್ವಾನುಮತಿ ಪಡೆಯದಿದ್ದ ಕಾರಣ ಒಂದು ಗಂಟೆಯ ಬಳಿಕ ಪೊಲೀಸರು ಅಲ್ಲಿ ಸೇರಿದವರನ್ನು ಚದುರಿಸಿದರು.

You might also like
Leave a comment