This is the title of the web page

ಮುಳುಗಿದ್ದ ಹಡಗಿನಲ್ಲಿ ಇದೆ 200 ಟನ್ ಬಂಗಾರ, ರತ್ನಗಳು!

ಲಂಡನ್‌, 11-ಸುಮಾರು 200 ಟನ್ ಬಂಗಾರ, ಬೆಳ್ಳಿ ಮತ್ತು ರತ್ನಗಳಿಂದ ತುಂಬಿದ್ದ ಹಡಗು ಸಮುದ್ರದ ಮೂರು ಕಿಲೋ ಮೀಟರಗೂ ಹೆಚ್ಚಿನ ಆಳದಲ್ಲಿ ಪತ್ತೆಯಾಗಿದ್ದು ಅವುಗಳ ಬೆಲೆ ಸುಮಾರು 1.3 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ಸ್ಪೇನ್‌ನ ಮುಳುಗಿದ್ದ ಹಡಗಿನ ಫೋಟೋಗಳನ್ನು ಕೋಲಂಬಿಯಾದ ಸೇನೆ ಬಿಡುಗಡೆ ಮಾಡಿದೆ.

ಕೋಲಂಬಿಯಾದ ಬಂದರು ನಗರ ಕಾರ್ಟಜೇನಾ ಬಳಿಯ ಸಮುದ್ರದಲ್ಲಿ 1708 ರಲ್ಲಿ ಎರಡು ನೂರು ಟನ್ ಚಿನ್ನ, ಬೆಳ್ಳಿ ಮತ್ತು ರತ್ನಗಳಿದ್ದ ಹಡಗು ಮುಳುಗಡೆಯಾಗಿತ್ತು. 2015ರಲ್ಲಿ ಈ ಹಡಗು ಪತ್ತೆಯಾದ ಬಗ್ಗೆ ವರದಿಯಾಗಿತ್ತಾದರೂ ಈ ವರೆಗೂ ಹಡಗಿನ ಬಳಿ ಮಾನವ ಚಲನವಲನ ಸಾಧ್ಯ ಆಗಿರಲಿಲ್ಲ.

ರಿಮೋಟ್‌ನಿಂದ ಕಾರ್ಯನಿರ್ವಹಿಸುವ ನಾಲ್ಕು ಸಾಧನಗಳನ್ನು ಸಮುದ್ರದ 3100 ಅಡಿ ಆಳಕ್ಕೆ ಕಳುಹಿಸಿ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಸಾಂಸ್ಕೃತಿಕ ಸಚಿವಾಲಯದ ಮೇಲುಸ್ತುವಾರಿಯಲ್ಲಿ ನೌಕಾಪಡೆ ಈ ಕಸರತ್ತು ನಡೆಸಿದೆ ಎಂದು ಕೊಲಂಬಿಯಾ ಸೇನೆ ತಿಳಿಸಿದೆ.

ಈಗ ಸೆರೆಹಿಡಿದಿರುವ ಚಿತ್ರಗಳಲ್ಲಿ ಚಿನ್ನದ ತುಣುಕುಗಳು, ಗಾಜಿನ ಬಾಟಲಿಗಳು, ಪಿಂಗಾಣಿ ವಸ್ತುಗಳು ಕಂಡುಬಂದಿವೆ. ಇದರ ಪಕ್ಕದಲ್ಲೇ ಮತ್ತೆರಡು ಹಡಗಿನ ಅವಶೇಷ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಯಾನ್‌ ಓಸೆ ಗ್ಯಾಲಿಯನ್‌’ ಎಂಬ ಈ ಹಡಗು ಸ್ಪೇನ್‌ ರಾಜಮನೆತನಕ್ಕೆ ಸೇರಿದ್ದಾಗಿದ್ದು, 1708ರಲ್ಲಿ ಕೊಲಂಬಿಯಾದ ಕರಾವಳಿ ಕಾರ್ಟಜೇನಾ ಬಳಿ ಬ್ರಿಟಿಷರ ದಾಳಿಯಿಂದ ಈ ಹಡಗು ಮುಳುಗಡೆಯಾಗಿತ್ತು. ಆ ಸಂದರ್ಭದಲ್ಲಿ 600 ಸಿಬ್ಬಂದಿ ಹಡಗಿನಲ್ಲಿದ್ದರು. ಕೆಲವೇ ಕೆಲವು ಮಂದಿ ಮಾತ್ರ ಬದುಕುಳಿದಿದ್ದರು. ಆ ವೇಳೆ ಹಡಗಿನಲ್ಲಿ 200 ಟನ್ ಸಂಪತ್ತು ಇತ್ತು. ಹೀಗಾಗಿ ಹಲವರು ಶೋಧ ನಡೆಸಿದ್ದರು. 2015ರಲ್ಲಿ ಈ ಹಡಗಿನ ಬಗ್ಗೆ ಕುರುಹು ಪತ್ತೆಯಾಗಿತ್ತು.

ಈ ಹಡಗಿನಲ್ಲಿರುವ ಸಂಪತ್ತಿಗಾಗಿ ಕೊಲಂಬಿಯಾ, ಸ್ಪೇನ್‌ ಹಾಗೂ ಬೊಲಿವಿಯಾ ನಡುವೆ ಜಟಾಪಟಿ ನಡೆಯುತ್ತಿದೆ. ತನ್ನ ಕರಾವಳಿಯಲ್ಲಿ ಈ ಹಡಗು ಪತ್ತೆಯಾಗಿರುವುದರಿಂದ ಅದು ತನ್ನ ಸಾಂಸ್ಕೃತಿಕ ಪರಂಪರೆಗೆ ಸೇರಿದ್ದಾಗಿರುತ್ತದೆ. ಅದರಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಕೊಲಂಬಿಯಾ ಸರ್ಕಾರ ಹೇಳಿದೆ. ಆದರೆ, ಈ ಹಡಗು ತನ್ನದಾಗಿರುವ ಕಾರಣ ಅದರಲ್ಲಿರುವ ಎಲ್ಲ ಸಂಪತ್ತು ತನ್ನದು ಎಂದು ಸ್ಪೇನ್‌ ವಾದಿಸುತ್ತಿದೆ. ಹಡಗಿನಲ್ಲಿರುವ ಚಿನ್ನವನ್ನು ಗಣಿಗಳಿಂದ ತೆಗೆದಿದ್ದು ತನ್ನ ದೇಶದ ಪ್ರಜೆಗಳು. ಹೀಗಾಗಿ ಅದೆಲ್ಲಾ ತನಗೆ ಸೇರಬೇಕು ಎಂದು ಬೊಲಿವಿಯಾ ವಾದಿಸುತ್ತಿದೆ. ಹೀಗಾಗಿ ಅಂತಿಮವಾಗಿ ಹಡಗಿನಲ್ಲಿರುವ ಅಪಾರ ಸಂಪತ್ತು ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

You might also like
Leave a comment