This is the title of the web page

ಹಿಜಾಬ್ ವಿವಾದ ಕುರಿತು ಹೊರಗಿನ ದೇಶಗಳ ಪ್ರತಿಕ್ರಿಯೆ ಬೇಕಿಲ್ಲ -ಭಾರತ

ಹೊಸದಿಲ್ಲಿ, 18- ಕರ್ನಾಟಕದ ಹಿಜಾಬ್‌ ವಿವಾದದ ಬಗ್ಗೆ ಕೆಲವು ದೇಶಗಳು ಟೀಕಿಸಿರುವ ಕುರಿತು ತನ್ನ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯವು, ಭಾರತದ ಆಂತರಿಕ ವಿಷಯಗಳ ಕುರಿತು ಹೊರ ರಾಷ್ಟ್ರಗಳ ಪ್ರತಿಕ್ರಿಯೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಾತನಾಡಿ, ಇದು ಭಾರತದ ಆಂತರಿಕ ವಿಷಯವಾಗಿರುವುದರಿಂದ ಬೇರೆ ದೇಶಗಳಿಂದ ಹಾಗೂ ಹೊರಗಿನವರಿಂದ ಯಾವುದೇ ಪ್ರತಿಕ್ರಿಯೆ ಸ್ವಾಗತಾರ್ಹವಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಸಾಂವಿಧಾನಿಕ ಕಾರ್ಯವಿಧಾನ, ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ತತ್ವವಿದೆ. ಈ ವಿಷಯಗಳ ಬಗ್ಗೆ ಪರಿಹಾರಗಳನ್ನು ಹುಡುಕಲು ನಮಗೆ ಚೌಕಟ್ಟನ್ನು ನೀಡುತ್ತದೆ. ಈ ವಿಷಯವನ್ನು ಈಗ ಕರ್ನಾಟಕ ಹೈಕೋರ್ಟ ಪರಿಶೀಲಿಸುತ್ತಿದೆ. ಭಾರತದ ಸಂವಿಧಾನ ಮತ್ತು ಅದರ ಜನರಿಗೆ ಸಂಬಂಧಿಸಿದ ಆಂತರಿಕ ಸಮಸ್ಯೆಗಳು ಮತ್ತು ವಿಷಯಗಳ ಕುರಿತು ಹೊರಗಿನವರ ಪ್ರತಿಕ್ರಿಯೆ ಸ್ವೀಕಾರಾರ್ಹವಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಸಹ ಭಾರತದ ಆಂತರಿಕ ವಿಚಾರದ ಕುರಿತು ಪಾಕಿಸ್ತಾನವನ್ನು ಒಳಗೊಂಡ ಮುಸ್ಲಿಂ ಬಹುಸಂಖ್ಯಾತರಿರುವ ದೇಶಗಳ ಸಂಘಟನೆ ನೀಡಿರುವ ಹೇಳಿಕೆಯನ್ನು ಭಾರತ ಬಲವಾಗಿ ಖಂಡಿಸಿತ್ತು.

ಉತ್ತರಾಖಂಡದ ಹರಿದ್ವಾರದಲ್ಲಿನ ಧರ್ಮ ಸಂಸದ್‌ನಲ್ಲಿ ಮಾಡಿದ ದ್ವೇಷ ಭಾಷಣಗಳನ್ನು ಉಲ್ಲೇಖಿಸಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ‘ಹಿಂದುತ್ವ ಪ್ರತಿಪಾದಕರಿಂದ ಮುಸ್ಲಿಮರ ಹತ್ಯಾಕಾಂಡಕ್ಕೆ ಸಾರ್ವಜನಿಕವಾಗಿ ಕರೆ ನೀಡಿರುವುದು ಕಳವಳಕಾರಿ’ ಎಂದು ಹೇಳಿತ್ತು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ಸಚಿವಾಲಯವು, ಸಾಂವಿಧಾನಿಕ ಚೌಕಟ್ಟು ಮತ್ತು ಯಾಂತ್ರಿಕತೆಗಳು ಹಾಗೂ ಪ್ರಜಾಸತ್ತಾತ್ಮಕ ತತ್ವಗಳು ಮತ್ತು ರಾಜ್ಯ ವ್ಯವಸ್ಥೆಗಳಿಗೆ ಅನುಗುಣವಾಗಿ ಭಾರತದಲ್ಲಿನ ವಿಚಾರಗಳನ್ನು ಪರಿಗಣಿಸುತ್ತದೆ ಮತ್ತು ಬಗೆಹರಿಸುತ್ತದೆ. ಒಐಸಿ ಕಾರ್ಯಾಲಯದ ಕೋಮುವಾದಿ ಮನಸ್ಥಿತಿಯು ಈ ವಾಸ್ತವ ಅಂಶಗಳ ಸೂಕ್ತ ಪರಿಗಣನೆಗೆ ಅವಕಾಶ ನೀಡುವುದಿಲ್ಲ. ಭಾರತದ ವಿರುದ್ಧದ ಮಹಾಪಾತಕ ಪ್ರಚಾರಗಳನ್ನು ಮುಂದುವರಿಸಲು ಒಐಸಿ ಪಟ್ಟಭದ್ರ ಹಿತಾಸಕ್ತಿಗಳಿಂದ ಹೈಜಾಕ್ ಆಗುವುದು ಮುಂದುವರಿಸಿದೆ ಎಂದು ಹೇಳಿತ್ತು.

You might also like
Leave a comment