ಮುಂಬೈ, ಸೆ.16- ಖ್ಯಾತ ಹಿಂದಿ ಚಿತ್ರನಟ ಸಲ್ಮಾನ ಖಾನ್ ಹತ್ಯೆಗೆ ಎರಡು ಬಾರಿ ಪ್ರಯತ್ನ ನಡೆಸಲಾಗಿತ್ತು ಎಂಬ ವರದಿ ಮತ್ತು ಅವರಿಗೆ ಬಂದ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ನಟ ಸಲ್ಮಾನ ಖಾನ್ ಜೀವ ಬೆದರಿಕೆ ಪ್ರಕರಣದ ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಕೊಲೆಯ ನಂತರ ಸಲ್ಮಾನ ಖಾನ್ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಜೂನ್ನಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೊದಲು ಈ ಪ್ರಕರಣದ ತನಿಖೆಯನ್ನು ಬಾಂದ್ರಾ ಪೊಲೀಸರು ನಡೆಸುತ್ತಿದ್ದರು. ಈಗ ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಹೀಗಾಗಿ ತನಿಖಾ ತಂಡ ದೆಹಲಿಗೆ ಭೇಟಿ ನೀಡಿ ಬಂಧಿತ ಆರೋಪಿಗಳ ವಿಚಾರಣೆ ನಡೆಸಲಿದೆ.
ಗಾಯಕ ಸಿಧು ಮೂಸಾವಾಲಾರನ್ನು ಕೊಂದ ಬಂಧಿತ ಆರೋಪಿಗಳು ಸಲ್ಮಾನ ಅವರನ್ನು ಎರಡು ಬಾರಿ ಹತ್ಯೆ ಮಾಡುವ ಉದ್ದೇಶದಿಂದ ಪನ್ವೇಲ್ನಲ್ಲಿರುವ ಸಲ್ಮಾನ ಖಾನ್ ಅವರ ಫಾರ್ಮಹೌಸ್ಗೆ ಅತಿಕ್ರಮಣ ಮಾಡಿದ್ದರು. ಅಲ್ಲಿನ ಅವರ ವಾಚಮನ್ ಕೂಡ ಸಂಚುಕೋರರು ಸ್ನೇಹ ಮಾಡಲು ಪ್ರಯತ್ನಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಲಾರೆನ್ಸ ಬಿಷ್ಣೋಯ ಗ್ಯಾಂಗ್ನ ಮೂವರು ಸದಸ್ಯರು ಈ ವರ್ಷದ ಜೂನ್ನಲ್ಲಿ ಸಲ್ಮಾನ ಖಾನ್ ಮತ್ತು ಅವರ ತಂದೆ ಸಲೀಮ ಖಾನ್ಗೆ ಬೆದರಿಕೆ ಪತ್ರ ಕಳಿಸಿದ್ದರು.