This is the title of the web page

ವೇದಿಕೆ ಮೇಲೆ ಬಿದ್ದ ಲೈಟಿಂಗ್ ಕಂಬ; ಕೂದಲೆಳೆ ಅಂತರದಲ್ಲಿ ಪಾರಾದ ಸಂಸದ ಈರಣ್ಣ ಕಡಾಡಿ

ಮೂಡಲಗಿ, ಮೇ 13- ರಸಮಂಜರಿ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದ್ದ ಲೈಟಿಂಗ್ ಕಂಬ ಉರುಳಿ ಬಿದ್ದು ಅವಘಡ ಸಂಭವಿಸಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಬಿಜೆಪಿ ಸಂಸದ ಈರಣ್ಣ ಕಡಾಡಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಚೂನಮ್ಮದೇವಿ ಜಾತ್ರೆ ನಡೆಯುತ್ತಿದ್ದು, ನಿನ್ನೆ ಗುರುವಾರ ರಾತ್ರಿ ಏರ್ಪಡಿಸಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಅಳವಡಿಸಿದ್ದ ಲೈಟಿಂಗ್ ಕಂಬ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ, ಕಾರ್ಯಕ್ರಮ ಉದ್ಘಾಟಿಸಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವರು ಅಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಈರಣ್ಣ ಕಡಾಡಿ ಅವರು, ನಿನ್ನೆ ರಾತ್ರಿ ರಾಜಾಪುರ ಗ್ರಾಮದ ಚೂನಮ್ಮದೇವಿ ಜಾತ್ರೆಯಲ್ಲಿ, ಲೈಟಿಂಗ್ ಸಿಸ್ಟಮ್‌ಗೆ ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಉರುಳಿ ಬಿದ್ದು ಆಕಸ್ಮಿಕ ಅವಘಡ ಸಂಭವಿಸಿತು. ಇಬ್ಬರು ಮೂವರಿಗೆ ಗಾಯ ಆಗಿದ್ದು ನಾವೆಲ್ಲರೂ ಬಚಾವ್ ಆಗಿದ್ದೇವೆ. ಗ್ರಾಮದ ಜಮೀನಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ಅವಘಡ ಸಂಭವಿಸಿದೆ. ಸ್ವಲ್ಪ ಆಯತಪ್ಪಿದ್ರೂ ವೇದಿಕೆ ಮೇಲಿದ್ದ ಗಣ್ಯರ ಪ್ರಾಣ ಹಾನಿ ಆಗುತ್ತಿತ್ತು. ವಿದ್ಯುತ್ ಅವಘಡ ಕೂಡ ಸಂಭವಿಸುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.

You might also like
Leave a comment