This is the title of the web page

ಝಣ ಝಣ ಕಾಂಚಾಣ!

ಜಗತ್ತಿನಲ್ಲಿ ಪರಮ ಸುಖ ಎನ್ನಿಸುವ ಹತ್ತು ಸಂಗತಿಗಳನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ ಯಾವುದೂ ಹಣ ಅಥವಾ ಆಸ್ತಿ ಮೂಲದಿಂದ ದೊರೆಯುವುದಿಲ್ಲ ಎಂದು ಸಾಬೀತಾಗಿದೆ. ಜೊತೆಗೆ ಹಣ ಮತ್ತು ಆಸ್ತಿಯ ಮೋಹದಿಂದ ಹಾಳಾಗುವ ಮನುಷ್ಯರ ಕತೆಗಳು ಸಾಕಷ್ಟಿವೆ. ಚಿನ್ನದ ಆಸೆಗೆ ಬಿದ್ದ ಮೈದಾಸ ಎಂಬ ರಾಜ ಮುಟ್ಟಿದ್ದೆಲ್ಲ ಚಿನ್ನ ಆಗುವ ವರ ಪಡೆದ. ಆದರೆ ಆತ ತಿನ್ನುವ ಅನ್ನ, ಕುಡಿಯುವ ನೀರು, ಕೊನೆಗೆ ಆತ್ಮೀಯ ಮಗಳು ಕೂಡ ಮುಟ್ಟುತ್ತಿದ್ದಂತೆ ಚಿನ್ನ ಆದದ್ದು ದುರಂತ. ಬೆಳಿಗ್ಗೆಯಿಂದ ಸಂಜೆವರೆಗೆ ಎಷ್ಟು ದೂರ ಕ್ರಮಿಸುತ್ತೀಯೋ ಅಷ್ಟೆಲ್ಲ ಜಮೀನು ನಿನಗೆ ಎಂದದ್ದಕ್ಕೆ ಓಡಿ ಓಡಿ ಸೂರ್ಯಾಸ್ತದ ವೇಳೆಗೆ ದಣಿದು ಬಿದ್ದು ಸತ್ತವನಿಗೆ ಕೊನೆಗೆ ದಕ್ಕಿದ್ದು ಮೂರಡಿ, ಅರಡಿ ಜಾಗ ಎಂಬ ಕತೆಯೂ ಪ್ರಚಲಿತ. ಆದರೂ ಹಣಕ್ಕೆ, ಆಸ್ತಿಗೆ ಹಂಬಲಿಸಿ ಬೇಡದ ಎಲ್ಲ ಮಾರ್ಗಗಳನ್ನು ಅನುಸರಿಸುವ ಜನ ಎಲ್ಲ ಕಾಲದಲ್ಲಿಯೂ ಸಿಗುತ್ತಾರೆ. ನಮ್ಮ ಮನೆ ಎಷ್ಟೇ ದೊಡ್ಡದಿದ್ದರೂ, ನಾವು ಮಲಗುವುದು ಮನೆಯ ಶಯ್ಯಾಗೃಹದ ಚಿಕ್ಕ ಮಂಚದ ಮೇಲೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರಿ ಮಾಡುವ ಭೂಪತಿ 28 ಮನೆಗಳನ್ನು ಕಟ್ಟಿಸಿದ್ದಾನಂತೆ, ಅದೂ ಲಂಚ ಹೊಡೆದ ಹಣದಿಂದ. ಇನ್ನೊಬ್ಬ ಮಹಾಶಯನಿಗೆ ಹಣ ಇಡಲು ಬೇರೆಲ್ಲೂ ಜಾಗ ಸಿಗಲಿಲ್ಲವೆಂದು ನೀರಿನ ಪೈಪ್‍ನಲ್ಲಿ ಹಣ ತುರುಕಿ ಇಟ್ಟಿದ್ದು ಹದಿನೈದು ಲಕ್ಷ ಅಂತೆ. ಹೀಗೆ ನಾನಾ ವಿಧದ ಕತೆಗಳು ವರದಿಗಳಾಗಿ ಪ್ರಕಟ ಆದದ್ದು ನಿಮಗೆ ನೆನಪಿದೆ. ಅಂತಹ ವರದಿ ಓದಿದಾಗ ಮತ್ತು ಕೇಳಿದಾಗ, ಸರ್ಕಾರಿ ನೌಕರರಂಥ ಭ್ರಷ್ಠರು ಇಲ್ಲವೇ ಇಲ್ಲ, ಅವರನ್ನು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದೆಲ್ಲ ಟೀಕಿಸುತ್ತೇವೆ. ವಿಚಿತ್ರ ಏನು ಗೊತ್ತಾ? ನಮ್ಮನ್ನು ತಂದು ಅಲ್ಲಿ ಕೂರಿಸಿದರೂ ನಾವು ಮಾಡುವುದೂ ಅದನ್ನೇ. ಶ್ರೀಮಂತರೆಲ್ಲ ಕೆಟ್ಟವರು, ಬಡವರೆಲ್ಲ ಒಳ್ಳೆಯವರು ಎಂದು ಸಾಮಾನ್ಯ ನಂಬಿಕೆ. ಆದರೆ ಅದೇ ಬಡವನಿಗೆ ಒಂದಿಷ್ಟು ಹಣ, ಅಧಿಕಾರ ಕೊಟ್ಟು ನೋಡಿ, ಅವನೆಂಥ ನೀಚ ಆಗಬಲ್ಲ ಎನ್ನುವುದು ತಿಳಿಯುತ್ತದೆ.

ಝಣ ಝಣ ಕಾಂಚಾಣ ಎಂದರೆ ಹಾಗೇ. ಹಣ ಕಂಡ ಕೂಡಲೆ ಹೆಣ ಕೂಡ ಬಾಯಿ ಬಿಡುತ್ತದೆ ಎನ್ನುತ್ತಾರೆ. ಆಚಾರ ಹೇಳಲು, ಬದನೆಕಾಯಿ ತಿನ್ನಲು ಎಂದು ಗಾದೆಯೇ ಇದೆ. ನಾವು ಹೇಳೋದು ಒಂದು, ಮಾಡೋದು ಮಾತ್ರ ಬೇರೆಯೇ. ಕಳೆದ ವಾರ 68 ಸರ್ಕಾರೀ ಸಿಬ್ಬಂದಿ ಮೇಲೆ ಎಸಿಬಿ ದಾಳಿ ನಡೆಸಿತು. ನೂರಾರು ಕೋಟಿ ಅಕ್ರಮ ಆಸ್ತಿ ಪತ್ತೆ ಆಯಿತು. ಇದೆಲ್ಲ ಒಂಧರ್ಥದಲ್ಲಿ ತೀರಾ ಜುಜುಬಿ ಮೊತ್ತ. ಇಂಥ ದಾಳಿ ನಡೆದು ಲಂಚ ಪಡೆದವರ ಹೆಸರು ಬಯಲಾದಾಗ, ಇನ್ನು ಎಲ್ಲ ಸರಿ ಆಗಿಬಿಡುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ. ಇಷ್ಟೇ ಅಲ್ಲ. ಅಷ್ಟು ಅಕ್ರಮ ಹಣ ಪತ್ತೆ ಅಯಿತು, ಇಷ್ಟು ಆಯಿತು ಎಂದೆಲ್ಲ ಕಂತೆ ಪುರಾಣ ಕೇಳುತ್ತೇವೆಯಾದರೂ ಅದನ್ನು ವಾಪಸು ಪಡೆಯುವ ಚತುರತೆಯೂ ಅವರಲ್ಲಿ ಇರುತ್ತದೆ.

ದಾಳಿ ನಡೆದು ಕೇಸು ಚಾಲೂ ಆಗುತ್ತದೆ. ಇವರ ಬಳಿ ಕಂಡ ಹೆಚ್ಚುವರಿ ಸಂಪತ್ತು ಹೆಚ್ಚುವರಿ ಅಲ್ಲವೇ ಅಲ್ಲ, ಅದೆಲ್ಲ ನ್ಯಾಯಯುತ ಸಂಪಾದನೆ ಎಂದು ನ್ಯಾಯಾಲಯಕ್ಕೆ ಸಾಬೀತು ಮಾಡಿ, ಹಣ ಆಸ್ತಿ ವಾಪಸ್ ಕೊಡಿಸುವ ಚಾಣಾಕ್ಷರೂ ನಮ್ಮಲ್ಲಿ ಇದ್ದಾರೆ. ಹಾಗೆ ದಾಳಿಗೊಳಗಾಗಿ ಸಸ್ಪೆಂಡ್ ಆದ ಒಬ್ಬರನ್ನು ವಿಚಾರಿಸಿದಾಗ ಅವರು ಹೇಳಿದರು ‘ಅವನೇನು ಕಿತ್ತುಕೋತಾನರಿ? ಲಾಯರ್‍ ಗೆ ಪರ್ಸೆಂಟೇಜ್ ಇಷ್ಟು ಕೊಡ್ತೀನಿ ಅಂದರೆ ಎಲ್ಲಾ ಸುಳ್ಳು ಕೇಸು ಅಂಥ ಪ್ರೂವ್ ಮಾಡ್ತಾನೆ’. ಹೀಗಿರುವಾಗ ಈ ದಾಳಿ, ಸಂಪತ್ತು ವಶ, ದಾಖಲೆ ಮುಟ್ಟುಗೋಲು ಎಲ್ಲವೂ ಒಂದು ರೀತಿ ಆಗಾಗ ನಡೆಯುವ ಪ್ರಹಸನ ಎಂದು ಕಾಣುತ್ತದೆ. ಏಕೆಂದರೆ, ನಾವು ಈ ವರೆಗೂ ಅಕ್ರಮ ಸಂಪಾದನೆ ಮಾಡಿದ ಯಾವೊಬ್ಬ ಪುಣ್ಯ ಪುರುಷನೂ ಜೈಲಿಗೆ ಹೋದದ್ದು ಕಂಡಿಲ್ಲ, ಕೇಳಿಲ್ಲ. ಅದೇ ಒಬ್ಬ ಬಡ ಪೇದೆ, ಮಗನ ಫೀ ಕಟ್ಟಲು ಐವತ್ತು ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು, ಕೆಲಸ ಕಳೆದುಕೊಂಡು, ಜೈಲು ಸೇರಿದ್ದು ವರದಿ ಆಗಿದೆ. ಇಲ್ಲಿ ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಇನ್ನೊಂದು ನ್ಯಾಯ ಇರುವುದನ್ನು ಗಮನಿಸಬೇಕು. ನ್ಯಾಯ ನಿಮ್ಮ ಪರ ಇರಬೇಕಾದರೆ ನೀವು ಶ್ರೀಮಂತರಾಗಿರಬೇಕು ಎನ್ನುವುದನ್ನು ಅರಿಯಬೇಕು.

ಎಲ್ಲರಿಗೂ ಗೊತ್ತಿರುವಂತೆ ಸಾವಿರಾರು ಕೋಟಿ ಹಣವನ್ನು ಬಿಟ್ ಕಾಯಿನ್ ಹೆಸರಲ್ಲಿ ಗುಳುಂ ಮಾಡಿದ ಸರ್ಕಾರದಲ್ಲಿ ಕುಳಿತ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸಂಚಕಾರ ತಲೆದೋರಿತ್ತು. ಅದರ ಬೆನ್ನಿಗೇ ಇದು ಪರ್ಸೆಂಟೇಜ್ ಸರ್ಕಾರ ಎಂದು ಪ್ರಧಾನಿ ವರೆಗೆ ದೂರು ಹೋಗಿತ್ತು. ಜನ ಎದ್ದೆದ್ದು ಕುಣಿಯುವಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತ ಇದ್ದವು. ಜನರ ಗಮನ ಬೇರೆಡೆ ಸೆಳೆಯಲೆಂದೇ ಈ ದಾಳಿಯ ಪ್ರಹಸನ ಸರ್ಕಾರ ಹಮ್ಮಿಕೊಂಡಂತೆ ಕಾಣುತ್ತದೆ. ಅಂದರೆ ಕೇವಲ ಕೆಲವು ನೂರು ಕೋಟಿ ಅಕ್ರಮ ಸಂಪತ್ತಿನ ವಿಚಾರ ತೋರಿಸಿ, ಸಾವಿರಾರು ಕೋಟಿ ನುಂಗಿ ಹಾಕಿದ ರಾಜಕಾರಣಿಗಳನ್ನು ಬಚಾವು ಮಾಡಲು ಹೂಡಿದ ತಂತ್ರ ಎಂಬಂತಿದೆ.

ನಮ್ಮ ರಾಜಕಾರಣಿಗಳಂಥ ನಯವಂಚಕರು ಬೇರೆಲ್ಲೂ ಇರುವುದು ಸಾಧ್ಯ ಇಲ್ಲ ಎನ್ನುತ್ತೇವೆ. ಅದಕ್ಕೆ ನಾವೂ ಕಾರಣ. ಬಿತ್ತಿದಂತೆ ಬೆಳೆ ಎನ್ನುತ್ತಾರೆ. ನಾವು ರಾಜಕಾರಣ ಕ್ಷೇತ್ರದಲ್ಲಿ ಹೆಚ್ಚಾಗಿ ಬಿತ್ತುವುದು ಅಯೋಗ್ಯ ಕಳೆಗಳನ್ನೇ ಹೊರತು ಉತ್ತಮ ಫಸಲು ನೀಡುವ ಬೀಜಗಳನ್ನಲ್ಲ. ಹಾಗಾಗಿಯೇ ಇಂದು ಇಡೀ ನಾಡಿನಲ್ಲಿ ಅಯೋಗ್ಯ ಕಳೆ ಬೆಳೆದು, ಮನುಷ್ಯ ಬದುಕಲು ಅವಶ್ಯವಾದ ನಿಜ ಪಯಿರನ್ನೇ ಅದು ನುಂಗುತ್ತಿದೆ. ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ. ಆದ್ದರಿಂದಲೇ ಇಂದಿನ ಈ ಕರಾಳ ಸ್ಥಿತಿಗೆ ಪರೋಕ್ಷವಾಗಿ ನಾವೂ ಕಾರಣ. ನಮ್ಮ ಮಕ್ಕಳಿಗೆ ನಾವು ಹೇಗಾದರೂ ಸಂಪಾದನೆ ಮಾಡು, ಕಾರು ಬಂಗಲೆ ಇರಲಿ, ಒಂದಲ್ಲ ನಾಲ್ಕು ಮಾಡಿದರೂ ಸರಿ ಎನ್ನುತ್ತೇವೆ. ನೆರೆಯವರನ್ನು ನಾಚಿಸುವಂತೆ ಬದುಕಬೇಕೆಂಬ ಹಂಬಲದಲ್ಲಿ ಸರ್ಕಾರಿ ನೌಕರಿ ಸೇರಿದ ಮಕ್ಕಳು ಲಂಚಕೋರರಾಗುತ್ತಾರೆ ಇಲ್ಲವೇ ವಿದೇಶಗಳಿಗೆ ಹಾರಿ ಡಾಲರ್ ಗಳಿಸಿ ಪರದೇಶಿಗಳಾಗುತ್ತಾರೆ. ಈ ಕುರಿತು ಯೋಚಿಸಬೇಕಲ್ಲವೇ?
-ಎ.ಬಿ.ಧಾರವಾಡಕರ
ಸಂಪಾದಕ

You might also like
Leave a comment