This is the title of the web page

ಬೆಲೆ ಏರಿಕೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಧರ್ಮದ ಹೆಸರಲ್ಲಿ ಗಲಾಟೆ -ಕುಮಾರಸ್ವಾಮಿ

ಬೆಂಗಳೂರು,೮- ಜೀವನಾವಶ್ಯಕ ವಸ್ತುಗಳ ಬೆಲೆಗಳ ನಿರಂತರ ಏರಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಬೆಲೆ ಏರಿಕೆ ವಿರುದ್ಧ ಫ್ರೀಡಂ ಪಾರ್ಕನಲ್ಲಿ ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ಕೊಡದ ರಾಜ್ಯ ಸರ್ಕಾರವು ಶೋಭಾಯಾತ್ರೆಗೆ ಅವಕಾಶ ನೀಡಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ, ಇದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿಗಳು ಧರ್ಮಗಳ ನಡುವೆ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ವಿರುದ್ಧ ಇಂದು ನಗರದಲ್ಲಿ ನಮ್ಮ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಯಬೇಕಿತ್ತು. ಜತೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಆಡಳಿತಾರೂಢ ಬಿಜೆಪಿ ತನಗೆ ಬೇಕಾದ ಸಂಘಟನೆಗಳು ಇಷ್ಟ ಬಂದಾಗಲೆಲ್ಲ ಹಮ್ಮಿಕೊಳ್ಳುವ ಶೋಭಾಯಾತ್ರೆಗೆ ಅವಕಾಶ ನೀಡುತ್ತಾರೆ ಎಂದರು.

ದಿನಬಳಕೆ ವಸ್ತುಗಳು ಗಗನಕ್ಕೆ ಏರಿವೆ. ಪಕ್ಷದ ವತಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಉಜ್ವಲ ಸ್ಕೀಂನಡಿ ಗ್ಯಾಸ್ ಸಿಲಿಡಂರ್ ಮೂರು ತಿಂಗಳು ಉಚಿತವಾಗಿ ಕೊಡ್ತೀವಿ ಅಂದ್ರು. ಆದರೆ ಈಗ ಗ್ಯಾಸ್ ಸಿಲಿಂಡರ್ ಬೆಲೆ 1000 ರೂಪಾಯಿ ದಾಟಿದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಈ ರೀತಿ ಬೆಲೆ ಏರಿಕೆ ಆಗುತ್ತಿದ್ದರೆ ಯಾವ ಬಡ ಕುಟುಂಬ ಮನೆ ಕಟ್ಟಲು ಸಾಧ್ಯ. ಕಬ್ಬಿಣದ ಬೆಲೆ ಟನ್ ಗೆ ಒಂದು ಲಕ್ಷ ರೂಪಾಯಿ ದಾಟಿದೆ. ಸಿಮೆಂಟ್ ಬೆಲೆಯಲ್ಲಿ ಚೀಲಕ್ಕೆ 500 ರೂಪಯಿವರೆಗೂ ಮುಟ್ಟಿದೆ. ಹೀಗಾದರೆ ಸಾಮಾನ್ಯ ಜನ ಬದುಕುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದರು.

ಅತ್ತ ಕೇಂದ್ರ ಸರಕಾರ ನಿರಂತರವಾಗಿ ತೈಲ ಬೆಲೆ ಏರಿಕೆ ಮಾಡುತ್ತಿದ್ದು ಇನ್ನು ಇಲ್ಲಿ ರಾಜ್ಯ ಸರಕಾರ ಈಗ ವಿದ್ಯುತ್ ದರ ಏರಿಸುವ ಮೂಲಕ ಶಾಕ್ ನೀಡಿದೆ. ಅದರಂತೆ ಈಗ ಹಾಲಿನ ಬೆಲೆ ಏರಿಸಲು ಹೊರಟಿದೆ. ಈ ಬೆಲೆ ಏರಿಕೆಯ ಫಲ ರೈತರಿಗೆ ಸಿಗುತ್ತಾ? ಎಂದು ಅವರು ಪ್ರಶ್ನಿಸಿದರು.

ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಆ ವಿಷಯದಿಂದ ಜನರ ಗಮನ ಬೇರೆಡೆ ಸೆಳೆಯಲು ಧರ್ಮದ ವಿಚಾರದಲ್ಲಿ ಗಲಾಟೆ ಸೃಷ್ಟಿ ಮಾಡಲಾಗುತ್ತಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಾಕ್ತಾ ಇದ್ದಾರೆ. ಹಿಜಾಬ್ ವಿಚಾರ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ದೂರಿದರು.

ಅಲ್ ಖೈದಾ ಮುಖಂಡನ ವಿಡಿಯೋ ಬಂದ ಮೇಲೆ ಈಗ ಮುಖ್ಯಮಂತ್ರಿ ತನಿಖೆಗೆ ಆದೇಶ ಮಾಡಿದ್ದಾರೆ. ಆರಂಭದಲ್ಲೇ ಹಿಜಾಬ್ ವಿಚಾರವಾಗಿ ಸರಿಯಾದ ಕ್ರಮ ವಹಿಸಿದ್ದರೆ ಹೀಗೆ ಆಗುತ್ತಿತ್ತಾ? ಡಾ.ಮನಮೋಹನ್ ಸಿಂಗ್ ಅವರನ್ನು ಮಾತೆತ್ತಿದರೆ ಮೌನಿ ಪ್ರಧಾನಿ ಅಂತೆಲ್ಲ ಟೀಕೆ ಮಾಡುತ್ತಿದ್ದ ಬಿಜೆಪಿ ಈಗ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಹಾಗಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಯಾಕೆ ಮೌನಿ ಆಗಿದ್ದಾರೆ? ಹಾಗಾದರೆ ಅವರನ್ನು ಮೌನಿ ಮುಖ್ಯಮಂತ್ರಿ ಎಂದು ಕರೆಯಬೇಕು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಸರಕಾರದ ವಿರುದ್ಧ ಮಾತಾಡಿದವರಿಗೆ ಗಡಿಪಾರು ಮಾಡುವ ಅಥವಾ ದೇಶ ದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ಕೇಸ್ ಹಾಕುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯು ಬೆಂಬಲ ಕೊಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸದಾ ಕಾಲ ಬಿಜೆಪಿ ಸರಕಾರ ಇರಲು ಸಾಧ್ಯವಿಲ್ಲ. ಪೊಲೀಸರಿಗೆ ಸಂಬಳ ಕೊಡುತ್ತ ಇರುವುದು ಶಾಸಕರು, ಮಂತ್ರಿಗಳು ಅಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡುತ್ತಿರುವುದು ಅನ್ನುವುದು ನೆನಪಿರಲಿ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

ವಿಶ್ವ ಹಿಂದೂ ಪರಿಷತ್, ಯಾವ ಭಜರಂಗದಳ, ಯಾವ ಆರ್ ಎಸ್ ಎಸ್ ನಿಮಗೆ ದೇಶದ ಬಗ್ಗೆ ಗೌರವ ಇದ್ದರೆ ಸರಕಾರದ ವಿರುದ್ಧ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿ. ಅದನ್ನು ಬಿಟ್ಟು ಹಲಾಲ್, ಜಟ್ಕಾ ಇಂತಾ ವಿಚಾರಗಳಲ್ಲಿ ಹೋರಾಡ್ತೀರಾ? ಎಂದರು.

ಹಿಂದು ವಿಶ್ವ ಪರಿಷತ್, ಭಜರಂಗದಳ ರೈತರು ಬೆಳೆಯುವ ಬೆಳೆಯನ್ನು ಖರೀದಿ ಮಾಡ್ತಾರಾ? ಬೀದಿ ಬದಿ ವ್ಯಾಪಾರಿ‌ಗಳ ಪರಿಸ್ಥಿತಿ ಏನಾಗಿದೆ. ಈ ಸರ್ಕಾರ ಅವರ ಬಗ್ಗೆ ಏನಾದ್ರೂ ಯೋಚನೆ ಮಾಡಿದೆಯಾ. ತಿನ್ನುವ ವಿಚಾರದಲ್ಲಿ ಧರ್ಮ ಬೆರೆಸಿರುವ ಈ ನೀತಿಗೆಟ್ಟ ಸರ್ಕಾರದ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.

ಜನರ ಕಷ್ಟ ಸುಖಕ್ಕೆ ದನಿ ಎತ್ತುತ್ತಿರುವವರು ನಾವು. ನಮ್ಮ ಪಕ್ಷ. ಆ ಸಂಕಷ್ಟ ಸಮಯದಲ್ಲಿ ಕೊರೊನಾದಿಂದ ಸಾವಿರಾರು ಕುಟುಂಬ ಬೀದಿ ಪಾಲಾಗಿವೆ. ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಈಗ ಬೆಲೆ ಏರಿಕೆಯಿಂದ ಜನ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಹೇಳುತ್ತಿದ್ದೇನೆ, ಈ ಸರ್ಕಾರದ ಪಾಪದ ಕೊಡ ತುಂಬಿದೆ. ಸಾಮರಸ್ಯ ಕೆಡಿಸುವ ಕೆಲಸದ ವಿರುದ್ಧ ನಾನು ದನಿ ಎತ್ತುತ್ತಿದ್ದೇವೆ ಎಂದರು ಕುಮಾರಸ್ವಾಮಿ ಹೇಳಿದರು.

You might also like
Leave a comment