This is the title of the web page

ಬೆಳವಡಿ ಮಲ್ಲಮ್ಮ ಉತ್ಸವ ನಿಮಿತ್ಯ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ

ಬೆಳಗಾವಿ, ಫೆ.23- ಜಗತ್ತಿನಲ್ಲೇ ಮೊದಲ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ್ದ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ ಸಂದರ್ಭದಲ್ಲಿ ಕಬಡ್ಡಿ ಮತ್ತು ವಾಲಿಬಾಲ್ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ.

ಬೆಳವಡಿಯ “ರಾಣಿ ಮಲ್ಲಮ್ಮ ಸ್ಮಾರಕ ಭವನ” ದಲ್ಲಿ ಬುಧವಾರ ನಡೆದ ಬೆಳವಡಿ ಉತ್ಸವದ ಕ್ರೀಡಾ ಉಪ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಈ ಬಾರಿ ಅತ್ಯಂತ ಕಡಿಮೆ ಸಮಯಾವಕಾಶ ಇರುವುದರಿಂದ ಕುಸ್ತಿ ಪಂದ್ಯಾವಳಿ ಆಯೋಜಿಸುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಆದ್ದರಿಂದ ಈ ಬಾರಿ ಕಬಡ್ಡಿ ಮತ್ತು ವಾಲಿಬಾಲ್ ಆಯೋಜಿಸಲು ಸದಸ್ಯರು ಸರ್ವಾನುಮತದಿಂದ ಒಪ್ಪಿಗೆಯನ್ನು ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರೀಡಾ ಉಪ ಸಮಿತಿಯ ಅಧ್ಯಕ್ಷ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಮಿಲ್ಲಾನಟ್ಟಿ ಅವರು, ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮಿತಿಯ ಸದಸ್ಯರ ಒಮ್ಮತದಂತೆ ಪುರುಷರಿಗೆ ಕಬಡ್ಡಿ ಟೂರ್ನಿ ಹಾಗೂ ಮಹಿಳೆಯರು ಮತ್ತು ಪುರುಷರ ವಾಲಿಬಾಲ್ ಟೂರ್ನಿ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫೆ.28 ರಂದು ಬೆಳವಡಿ ಮಲ್ಲಮ್ಮನ ಉತ್ಸವ ಆರಂಭಗೊಳ್ಳಲಿದೆ. ಮಾರ್ಚ್ 1 ರಂದು ಕಬಡ್ಡಿ ಮತ್ತು ವಾಲಿಬಾಲ್ ಟೂರ್ನಿ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಕ್ರೀಡಾಪಟುಗಳು ಮತ್ತು ನಿರ್ಣಾಯಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು.

ಕುಡಿಯುವ ನೀರು, ಬ್ಯಾರಿಕೇಡ್ ಹಾಗೂ ಬೆಳಕಿನ ವ್ಯವಸ್ಥೆಯನ್ನು ಮಾಡುವಂತೆ ಸಂಬಂಧಿಸಿದ ಸಿಬ್ಬಂದಿಗೆ ತಿಳಿಸಲಾಯಿತು.
ಸಾಧ್ಯವಾದರೆ ಈ ವರ್ಷ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸುವಂತೆ ಸಮಿತಿಯ ಕೆಲ ಸದಸ್ಯರು ಸಲಹೆ ನೀಡಿದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸಮಯಾವಕಾಶ ಕಡಿಮೆ ಇರುವುದರಿಂದ ಕಬಡ್ಡಿ ಮತ್ತು ವಾಲಿಬಾಲ್ ಟೂರ್ನಿ ಮಾತ್ರ ಆಯೋಜಿಸಲು ತೀರ್ಮಾನಿಸಲಾಯಿತು.

ಪ್ರಚಾರ ಸಮಿತಿಯ ಸಭೆ:

ಇದೇ ಸಂದರ್ಭದಲ್ಲಿ ಉತ್ಸವದ ಪ್ರಚಾರ ಉಪ ಸಮಿತಿಯ ಸಭೆ ಕೂಡ ನಡೆಯಿತು.
ಉತ್ಸವದ ಆಹ್ವಾನ ಪತ್ರಿಕೆ, ಬ್ಯಾನರ್ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಉಪ ವಿಭಾಗಾಧಿಕಾರಿ ಕಚೇರಿಯಿಂದ ಮುದ್ರಿಸಿದ ಬಳಿಕ ಜಿಲ್ಲೆಯಾದ್ಯಂತ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಸದಸ್ಯ ಎ.ಬಿ.ಬೋಳಶೆಟ್ಟಿ ಅವರು, ಬೆಳವಡಿ ಉತ್ಸವಕ್ಕಾಗಿ ಅನೇಕ ಜನರು ದುಡಿದಿದ್ದಾರೆ ಮುಂಬರುವ ದಿನಗಳಲ್ಲಿ ಉತ್ಸವದ ವಿವಿಧ ಸಮಿತಿಗಳಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಬೈಲಹೊಂಗಲ, ಕಿತ್ತೂರು, ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಂ.ಪಿ ಉಪ್ಪಿನ, ಎಸ್.ಎಂ ಕರೀಕಟ್ಟಿ, ಬಿ.ಎಸ್ ಭರಮಣ್ಣವರ, ಎಸ್.ಜಿ ಹಿರೇಮಠ, ನಿಂಗಪ್ಪ ಕರೀಕಟ್ಟಿ, ಆನಂದ ರೊಟ್ಟಯ್ಯನವರ, ಮಹಾಂತೇಶ ಕರೀಕಟ್ಟಿ, ರಮೇಶ ಉಳ್ಳಿಗೇರಿ, ಶಂಕರ ಕರೀಕಟ್ಟಿ, ಮಲ್ಲಸರ್ಜ ಮಾರಿಹಾಳ, ನಾಗಪ್ಪ ಗುಗ್ಗರಿ, ವಿಶ್ವನಾಥ ಪೂಜಾರ, ನಾಗಪ್ಪ ಕರೀಕಟ್ಟಿ, ರವಿ ಮುರಗೋಡ ಹಾಗೂ ಈರಣ್ಣ ಬಾಗೇವಾಡಿ ಸಭೆಯಲ್ಲಿ ಉಪಸ್ಥಿತರಿದ್ದರು.

You might also like
Leave a comment