This is the title of the web page

ಕಸಾಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಮನೆಮನೆಗೆ ಮತದಾನದ ಕರೆ

ಬೆಂಗಳೂರು: ನವೆಂಬರ್ 19 ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಶನಿವಾರ ಮನೆ ಮನೆಗೆ ತೆರಳಿ ಪ್ರಚಾರ ಪ್ರಕ್ರಿಯೆ ನಡೆಸುವರು. ನ.21ರಂದು (ಭಾನುವಾರ) ರಾಜ್ಯಾದ್ಯಂತ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.

ಸುಮಾರು ಒಂದು ತಿಂಗಳಿಂದ ನಿರಂತರವಾಗಿ ಮಳೆ ಬೀಳುತ್ತಿದ್ದು, ಇನ್ನೂ ಮೂರ್ನಾಲ್ಕು ದಿನ ಮಳೆಯ ಮುನ್ಸೂಚನೆಯಿದೆ. ಹೀಗಾಗಿ ಭಾನುವಾರವೂ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಮತದಾನಕ್ಕೆ ಕೊಂಚ ಹಿನ್ನಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆದರೆ ಅಭ್ಯರ್ಥಿಗಳನ್ನು ಹೇಗೆ ಕರೆತರಬೇಕು ಎಂಬುದರ ಬಗೆಗೆ ಅಭ್ಯರ್ಥಿಗಳು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 3,05,373 ಮತದಾರರಿದ್ದು, ಗಡಿರಾಜ್ಯಗಳ 4628 ಹಾಗೂ ಹೊರ ರಾಜ್ಯಗಳ / ಹೊರದೇಶದಲ್ಲಿನ ಮತದಾರರು ಸೇರಿ ಒಟ್ಟು 3,10,109 ಅರ್ಹ ಮತದಾರರಿದ್ದಾರೆ. ಹೊರನಾಡು / ಹೊರದೇಶ / ಗಡಿರಾಜ್ಯ ಮತದಾರರಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ಮತಪತ್ರವನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ.

ಮೊಬೈಲ್ ಆಪ್‍ನಲ್ಲೇ ಮತದಾರರ ಮಾಹಿತಿ :ಮತದಾರರ ಅನುಕೂಲಕ್ಕಾಗಿ, ಮತದಾನದ ಪ್ರಮಾಣ ಹೆಚ್ಚಳವಾಗಬೇಕೆಂಬ ಸದುದ್ದೇಶದಿಂದ ಕ.ಸಾ.ಪ. ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಮೊಬೈಲ್ ಆ್ಯಪ್ ರೂಪಿಸಲಾಗಿದೆ. ಮತದಾರರ ವಿಳಾಸ / ಮತಗಟ್ಟೆ ವಿವರಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಹಾಗೂ ಕಸಾಪದ ಅಧಿಕೃತ ವೆಬ್‍ಸೈಟ್ ಅಲ್ಲಿಯೂ ಹುಡುಕು ಆಯ್ಕೆ (ಸರ್ಚಿಂಗ್) ರೂಪಿಸಿದ್ದು, ವಿವರಗಳನ್ನು ಸುಲಭವಾಗಿ ಹುಡುಕಬಹುದಾಗಿದೆ.
ಚುನಾವಣೆಯಲ್ಲಿ ಭಾಗವಹಿಸುವ ಮತದಾರರಿಗೆ ಮತದಾನದ ಸಮಯದಲ್ಲಿ ಬಹುತೇಕರಿಗೆ ತಮ್ಮ ಸದಸ್ಯತ್ವದ ಸಂಖ್ಯೆಯಾಗಲೀ ಅಥವಾ ಸದಸ್ಯತ್ವ ಪಡೆದ ದಿನಾಂಕವಾಗಲೀ ತಕ್ಷಣಕ್ಕೆ ನೆನಪಿಗೆ ಬಾರದೆ ಇರುವ ಸಂದರ್ಭದಲ್ಲಿ ಅನುಕೂಲವಾಗುವ ಉದ್ದೇಶದಿಂದ ಮತದಾರರ ಪಟ್ಟಿಯನ್ನು ಕನ್ನಡ ವರ್ಣಮಾಲೆಯ ಅಕ್ಷರಗಳಿಗನುಗುಣವಾಗಿ ಮುದ್ರಿಸಲಾಗಿದೆ.

ಕೇಂದ್ರ ಅಧ್ಯಕ್ಷರ ಮತ ಎಣಿಕೆಗೆ ಸಂಬಂಧಿಸಿದಂತೆ ಮಾಹಿತಿ ಕೇಂದ್ರವನ್ನು ಕೇಂದ್ರ ಚುನಾವಣಾಧಿಕಾರಿ ಕಚೇರಿ, 3ನೇ ಮಹಡಿಯಲ್ಲಿ ಸ್ಥಾಪಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರ ಮತ ಎಣಿಕೆಗೆ ಸಂಬಂಧಿಸಿದಂತೆ ಸಾಹಿತ್ಯ ಪರಿಷತ್ತಿನ ನೆಲಮಹಡಿಯಲ್ಲಿರುವ ಜಿಲ್ಲಾ ಕಸಾಪ ಚುನಾವಣಾಧಿಕಾರಿ ಕಚೇರಿಯಲ್ಲಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

You might also like
Leave a comment