ಬೆಳಗಾವಿ, ೨೫: ಕಳೆದ ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಗೋವಾ ಸಂಪರ್ಕ ಕಲ್ಪಿಸುವ ಇನ್ನೆರಡು ರಸ್ತೆಗಳು ಪ್ರವಾಹದ ಕಾರಣ ಸ್ಥಗಿತ ಆಗಿವೆ.
ಹಲತ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಖಾನಾಪುರ-ಜಾಂಬೋಟಿ-ಗೋವಾ ಹೆದ್ದಾರಿಯನ್ನು ಸಹ ಮುಚ್ಚಲಾಗಿದೆ.
ಅಲ್ಲದೇ ಖಾನಾಪುರ-ಹೆಮ್ಮಡಗಾ-ಅನಮೋಡ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಭೀಮಗಡ ಸಮೀಪದ ಮಂತುರ್ಗಾ ಬಳಿಯ ಹತಲತ್ರಿ ನದಿ ಮೇಲಿನ ಸೇತುವೆ ಮೇಲೆ 5 ಅಡಿ ನೀರು ಹರಿಯುತ್ತಿರುವುದರಿಂದ ಅಲ್ಲಿ ಸಂಚಾರ ಸ್ಥಗಿತವಾಗಿದೆ.
ಈಗಾಗಲೇ ಬೆಳಗಾವಿ-ಜಾಂಬೋಟಿ ರಸ್ತೆಯ ಕುಸಮಳ್ಳಿ ಸೇತುವೆಯ ಕುಸಿತದಿಂದ ರಸ್ತೆ ಬಂದ್ ಆಗಿದ್ದರಿಂದ ಗೋವಾ ಹೋಗಲು ಖಾನಾಪುರ-ಜಾಂಬೋಟಿ ಮೂಲಕ ವಾಹನಗಳು ಸಂಚರಿಸುತ್ತಿದ್ದವು. ಈಗ ಆ ರಸ್ತೆಯ ಸಂಚಾರ ಸಹ ಸಂಪೂರ್ಣವಾಗಿ ಬಂದಾಗಿದೆ.
ಹಬ್ಬಾನಟ್ಟಿಯ ಐತಿಹಾಸಿಕ ಮಾರುತಿ ದೇವಸ್ಥಾನವು ನೀರಿನಲ್ಲಿ ಮುಳುಗಿದೆ. ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಈ ಮಾರ್ಗದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.