This is the title of the web page

ಮಹಾಕಾಳಿ ಮಂದಿರಕ್ಕೆ ಭೂಮಿ ಪೂಜೆ

ನಿಲಜಿ, (ತಾ: ಬೆಳಗಾವಿ), 18- ಅಲೌಕಿಕ ಜ್ಞಾನಮಂದಿರ, ದಕ್ಷಿಣ ಮಹಾಕಾಳಿ ಮಂದಿರದ ಭೂಮಿ ಪೂಜೆ ಕಾರ್ಯಕ್ರಮವು ದಿನಾಂಕ ೧೬ ರಂದು ಬೆಳಿಗ್ಗೆ ನೆರವೇರಿತು. ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ವಿಭಾಗದ ಸಹ ಸಂಘಟನಾ ಮಂತ್ರಿ ಮನೋಹರ ಜಿ ಮಠದ ಹೋಮ ಹವನದೊಂದಿಗೆ ಭೂಮಿ ಶುದ್ಧಿ ಪೂಜೆ ಕಾರ್ಯ ನೆರವೇರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಿಡಸೋಸಿಯ ಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ನಿಡಸೋಸಿ ಮಾತನಾಡಿ, ದಕ್ಷಿಣ ಕಾಳಿ ಮಂದಿರ ನಿರ್ಮಿಸಿ ಕಾಳಿ ಆರಾಧಕರಿಗೆ ಕಾಳಿ ಮಾತೆಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಶ್ರೀ ಶಿವಾನಂದ ಗುರೂಜಿಯವರು ಸ್ವತಃ ಕಾಳಿ ದೇವಿಯನ್ನು ಒಲಿಸಿಕೊಂಡು ನಾಡಿನ ಉದ್ದಾರಕ್ಕೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಅಂದಾಜು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದ್ದು, ಈ ಮಂದಿರ ಸಮಾಜದ ಮಂದಿರ ಆಗಬೇಕೆಂದು ಸಮಾಜ ಬಾಂಧವರಲ್ಲಿ ಕೇಳಿಕೊಂಡರು.

ಹುಣಶ್ಯಾಳ ಪಿಜಿಯ ಪೂಜ್ಯ ಶ್ರೀ ನಿಜಗುಣ ದೇವರು ಆಶೀರ್ವಚನ ನೀಡಿ, ಸನ್ಯಾಸಿಗಳಾದ ನಾವು ವಿದ್ಯಾ ಗುರುಗಳನ್ನು ಮತ್ತು ದೀಕ್ಷಾ ಗುರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸ್ವಾಮೀಜಿಗಳಾದವರು ಪೂಜ್ಯ ಶ್ರೀ ಶಿವಾನಂದ ಗುರೂಜಿ ಅವರ ಕಾರ್ಯಗಳನ್ನು ಹತ್ತಿರದಿಂದ ನೋಡಬೇಕು. ಕೇವಲ ಐದು ವರ್ಷದಲ್ಲಿ ಜ್ಞಾನ ಮಂದಿರ, ಗೋಶಾಲೆ, ಗುರುಮಂದಿರ, ಕಾಳಿ ಮಂದಿರ, ಗುರುಕುಲಗಳನ್ನು ಕಟ್ಟಿ ಬೆಳೆಸಿದ ಪೂಜ್ಯರು ಇವರು ಎಂದು ನುಡಿದರು.

ಸಾನಿಧ್ಯ ವಹಿಸಿದ್ದ ಬೆಳಗಾವಿಯ ಕಾರಂಜಿ ಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಜಿ ಮಾತನಾಡಿ, ಆಶ್ರಮದ ಕೃಷಿ ಗೋಶಾಲೆ, ಜ್ಞಾನಮಂದಿರ, ಗುರುಮಂದಿರ ವಿಶೇಷ ಸಾಧಕರಿಗೆ ಅಲ್ಪ ಸಮಯದಲ್ಲಿ ಈ ನಾಡಿಗೆ ದೊರಕಿದ್ದು ಪುಣ್ಯ ಕಾರ್ಯವಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಪೂಜ್ಯಶ್ರೀ ಶಿವಾನಂದ ಗುರೂಜಿ, ತಾವು ಮಹಾಕಾಳಿ ಶಕ್ತಿಯ ಸತ್ಯದರ್ಶನವನ್ನು ನೋಡಿದ್ದು ಹಾಗೂ ಆ ಮೂಲಕ ತಮ್ಮ ಅನುಭವಕ್ಕೆ ಬಂದ ದೇವಿ ಸ್ವರೂಪ ಮಂದಿರದ ಬಗ್ಗೆ ಸಭಿಕರಿಗೆ ತಿಳಿಸಿದರು.

ಆಶಯ ನುಡಿಗಳನ್ನಾಡಿದ ಮನೋಹರ ಮಠ ಇವರು, ಮಂದಿರ ಹಾಗೂ ಮಠಗಳ ಮಹತ್ವ ತಿಳಿಸಿಕೊಟ್ಟರು. ಅಲ್ಲದೆ ಭಾರತ ದರ್ಶನ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಹಾದಾನಿಗಳ ಸನ್ಮಾನ ನೆರವೇರಿತು. ಮಂದಿರ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ನಿಧಿಯನ್ನು ದಾನಿಗಳು ಈಗಾಗಲೇ ನೀಡಿದ್ದಾರೆ.

ಸಮಾರಂಭದಲ್ಲಿ ಉಪಸ್ಥಿತರಿದ್ದ ಅಂಕಲಗಿಯ ಪೂಜ್ಯ ಅಡವಿ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಲಕ್ಷ ರೂ. ದೇಣಿಗೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಮ್ ವಂದನಾರ್ಪಣೆ, ನಗರ ಅಧ್ಯಕ್ಷ ಡಾ. ಬಸವರಾಜ ಬಾಗೋಜಿ ಸ್ವಾಗತ ಮತ್ತು ಪರಿಚಯ ಮಾಡಿದರು.

ವಿಶ್ವ ಹಿಂದೂ ಪರಿಷತ್ ಧರ್ಮಆಚಾರರ ಸಂಪರ್ಕ ಪ್ರಮುಖರಾದ ಬಸವರಾಜ ಹಳಂಗಳಿ ನಿರೂಪಣೆ ಮಾಡಿದರು ಹಾಗೂ ಶಾಂತಿ ಮಂತ್ರ ಹೇಳಿದರು.

ಗಣ್ಯರು, ಮಠದ ಸದ್ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೂರು ವರ್ಷದಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

You might also like
Leave a comment