This is the title of the web page

ಭಾಷೆಯನ್ನೂ ಸಹ ಬಿಡದವರು

ಸಿನೆಮಾಗಳಲ್ಲಿ ಹಣಕ್ಕಾಗಿ ಮತ್ತು ರಾಜಕೀಯದಲ್ಲಿ ಅಧಿಕಾರಕ್ಕಾಗಿ ಯಾವ ವೇಷ ಆದರೂ ತೊಡಲು ಜನ ಸಿದ್ಧ ಇರುತ್ತಾರೆ. ಅದನ್ನು ಸಾಬೀತು ಮಾಡುವ ಘಟನೆಗಳು ಕಣ್ಣ ಮುಂದೆಯೇ ನಡೆಯುತ್ತಿವೆ. ರಾಜಕೀಯ ಬಿಡಿ, ಅಲ್ಲಂತೂ ನೀಚರು ಸೇರಿಕೊಂಡು ಭಾಷೆ ಹೆಸರಲ್ಲಿ ದಿನಕ್ಕೊಂದು ಕಿತಾಪತಿ ಮಾಡುತ್ತಿರುತ್ತಾರೆ. ಈಗ ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡರು ಅನ್ನುವ ಹಾಗೆ ಅಜಯ ದೇವಗನ್ ಎಂಬ ಹಿಂದಿ ನಟನೊಬ್ಬ ಕನ್ನಡ ಸಿನೆಮಾ ಉದ್ಯಮದ ನಡೆ ಕುರಿತು ಎತ್ತಿರುವ ಆಕ್ಷೇಪದ ಹಿಂದೆ ನೂರಾರು ಜಟಿಲ ಸಂಗತಿಗಳು ಇವೆ.

ಮೊದಲಿನಿಂದಲೂ ಭಾರತೀಯ ಚಿತ್ರರಂಗದಲ್ಲಿ ಕೊಡು ಕೊಳ್ಳುವಿಕೆ ಇತ್ತು. ಪ್ರಾದೇಶಿಕೆ ಭಾಷೆಯಲ್ಲಿ ನಿರ್ಮಾಣ ಆದ ಉತ್ತಮ ಚಿತ್ರಗಳನ್ನು ಹಿಂದಿಯಲ್ಲಿ ಮರುನಿರ್ಮಾಣ (ರಿಮೇಕ್) ಮಾಡುವುದು ಸದಾ ಚಾಲ್ತಿಯಲ್ಲಿ ಇತ್ತು. ಇದಕ್ಕೆ ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಇದ್ದುದು ಒಂದು ಕಾರಣ. ಆದರೆ ಶಿಸ್ತಿಗೆ ಹೆಸರಾದ ದಕ್ಷಿಣ ಚಿತ್ರರಂಗಕ್ಕೆ ಭಿನ್ನವಾದ ಅಶಿಸ್ತಿನ ಪರಮಾವಧಿಯ ಹಿಂದಿ ಚಿತ್ರರಂಗದಲ್ಲಿ ತಲೆತಿರುಕ ಹೀರೋಗಳದ್ದೇ ಕಾರುಬಾರು. ಅವರು ಬಂದಾಗ ಬಂದರು, ಇಷ್ಟ ಬಂದರೆ ನಟಿಸಿದರು ಇಲ್ಲವಾದರೆ ಇಲ್ಲ. ಹೀಗೆ ಅಲ್ಲಿ ಚಿತ್ರ ತಯಾರಿಕೆ ಎಷ್ಟೇ ಲಾಭದಾಯಕ ಆದರೂ, ಚಿತ್ರ ತಯಾರಿಕೆ ಬಹಳ ತೊಡಕಿನದಾಗಿತ್ತು. ಹಲವು ಕ್ರಿಯಾಶೀಲ ನಿರ್ದೇಶಕರು, ಕತೆಗಾರರು ತಮ್ಮ ಇತಿಮಿತಿಯಲ್ಲಿ ಉತ್ತಮ ಚಿತ್ರ ನಿರ್ಮಿಸಿದ್ದುದು ನಿಜ. ಆದರೆ ಈ ಕೊಬ್ಬಿದ ನಾಯಕ, ನಾಯಕಿಯರಿಗೆ ಕತೆ ಒಪ್ಪಿಸುವುದೇ ಕಷ್ಟ ಆಗಿತ್ತು. ಈಗಲೂ ಹಿಂದಿ ಚಿತ್ರರಂಗದಲ್ಲಿ ನಾಯಕರು ಕಾಣಿಸಿಕೊಳ್ಳುವುದು ಕೇವಲ ಕ್ಲೋಸ್‍ಅಪ್ ಶಾಟ್‍ಗಳಲ್ಲಿ ಮಾತ್ರ. ಉಳಿದದ್ದೆಲ್ಲ ಅವರ ಡೂಪ್‍ಗಳು ನಿರ್ವಹಿಸುತ್ತಾರೆ. ಹಾಗೆ ನೋಡಿದರೆ, ತೆರೆಯ ಮೇಲೆ ಅವರು ಕಾಣಿಸುವ ಒಟ್ಟಾರೆ ಸಮಯದಲ್ಲಿ ಬಹುಪಾಲು ನಿಜವಾಗಿ ಇರುವುದು ಡೂಪ್ ಹೊರತು ಆ ನಾಯಕ ಖಂಡಿತ ಅಲ್ಲ. ಇದರಿಂದಲೇ ನೀವು ಅಲ್ಲಿನ ನಿರ್ಮಾಪಕ, ನಿರ್ದೇಶಕರ ಸ್ಥಿತಿ ಅರ್ಥ ಮಾಡಿಕೊಳ್ಳಬಹುದು.

ಜನಪ್ರಿಯ ದಕ್ಷಿಣದ ಚಿತ್ರಗಳನ್ನು ಹಿಂದಿಯಲ್ಲಿ ರೀಮೇಕ್ ಮಾಡುವುದು ಮೊದಲಿನಿಂದಲೂ ಟ್ರೆಂಡ್ ಆಗಿದೆ. ಬಹಳಷ್ಟು ಜನಪ್ರಿಯ ಹಿಂದಿ ಚಿತ್ರಗಳನ್ನು ದಕ್ಷಿಣದ ಭಾರತದ ಚಿತ್ರಗಳ ರಿಮೇಕ್ ಮಾಡಿಯೇ ನಿರ್ಮಿಸಲಾಗಿದೆ. ಹಿಂದಿ ಚಿತ್ರರಂಗದ ಅಮಿತಾಬ ಬಚ್ಚನ್, ರಾಜೇಶ ಖನ್ನಾ, ಸುನೀಲ ದತ್, ಮಿಥುನ ಚಕ್ರವರ್ತಿ, ಶಾಹರೂಖ ಖಾನ್, ಆಮೀರ ಖಾನ್, ಸಲ್ಮಾನ ಖಾನ್, ಅನೀಲ ಕಪೂರ, ಜಾಕಿ ಶ್ರಾಫ್, ಗೋವಿಂದಾ, ಸನ್ನಿ ಡಿಯೋಲ್, ಅಕ್ಷಯ ಕುಮಾರ, ಅಜಯ ದೇವಗನ್ ಆದಿ ಹಿಂದಿ ನಟರು ದಕ್ಷಿಣದ ಹಲವಾರು ರೀಮೇಕ್ ಚಿತ್ರಗಳ ಮೂಲಕವೇ ಹೆಚ್ಚಿನ ಜನಪ್ರಿಯತೆ ಪಡೆಯುವುದು ಸಾಧ್ಯ ಆಯಿತು. ರಾಜೇಂದ್ರ ಕುಮಾರ, ರಾಜಕುಮಾರ ಹಾಗು ಮೀನಾಕುಮಾರಿ ಅಭಿನಯದ “ದಿಲ್ ಏಕ್ ಮಂದಿರ” ಮತ್ತು ದಿಗ್ಗಜ ನಟ ದಿಲೀಪಕುಮಾರ ಅಭಿನಯದ “ರಾಮ ಔರ ಶ್ಯಾಮ್” ಸಹ ದಕ್ಷಿಣ ಭಾಷೆಯ ರಿಮೇಕ್ ಚಿತ್ರಗಳೇ. ಅದರಲ್ಲೂ ರಾಮ ಔರ ಶ್ಯಾಮ್ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಅದೇ ರೀತಿಯ ಸೀತಾ ಔರ್ ಗೀತಾ, ಕಿಶನ್ ಕನೈಯಾ, ಚಾಲಬಾಜ್ ಚಿತ್ರಗಳು ಹಿಂದಿಯಲ್ಲಿ ನಿರ್ಮಾಣಗೊಂಡು ಅಪಾರ ಯಶ ಕಂಡವು ಎಂಬುದನ್ನು ಮರೆಯಬಾರದು. ಹೀಗೆ ಎಣಿಸುತ್ತ ಹೋದರೆ ಸ್ವಾತಂತ್ರ್ಯದ ನಂತರ ಇಲ್ಲಿಯ ವರೆಗೂ ಲೆಕ್ಕವಿಲ್ಲದಷ್ಟು ದಕ್ಷಿಣದ ಚಿತ್ರಗಳು ಹಿಂದಿ ಭಾಷೆಯಲ್ಲಿ ರಿಮೇಕ್ ಆಗಿವೆ.

ಕಳೆದ ಐದಾರು ವರ್ಷಗಳಲ್ಲಿ ಈ ರಿಮೇಕ್ ಸಹವಾಸವೇ ಬೇಡ ಎಂದು ಕೆಲವು ನಿರ್ಮಾಪಕರು ದಕ್ಷಿಣದ ಚಿತ್ರಗಳನ್ನು ನೇರವಾಗಿ ಹಿಂದಿ ಭಾಷೆಗೆ ಡಬ್ ಮಾಡಿ ಪ್ರದರ್ಶಿಸುವ ಪರಿಪಾಠ ಆರಂಭಿಸಿದರು. ಟಿವಿ ಚಾನೆಲ್‍ಗಳ ಸಂಖ್ಯೆ ಹೆಚ್ಚಳದಿಂದ ಇಂಥ ಸಿನೆಮಾಗಳ ಟಿವಿ ಪ್ರಸಾರದಿಂದಲೇ ಬಂಡವಾಳ ಹಿಂದೆ ಪಡೆಯುವುದು ಸಾಧ್ಯ ಆಯಿತು. ಟಿವಿ ಪ್ರಸಾರ ಮತ್ತು ಚಿತ್ರಮಂದಿರಗಳಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆದಿದ್ದು ಕನ್ನಡದ ದರ್ಶನ್ ಅಭಿನಯದ ಸಿನೆಮಾ ಡಬ್ ಆದ ಕೃತಿ. ಯಾವಾಗ ಡಬ್ ಮಾಡುವುದು ಲಾಭದಾಯಕ ಎಂದು ಮನಗಂಡರೋ, ಆಗ ಹಿಂದಿ ನಟರ ಸೊಕ್ಕು ಮುರಿಯಲು ಅಲ್ಲಿನ ಬಹುಪಾಲು ನಿರ್ಮಾಪಕರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಿಯ ಜನಪ್ರಿಯ ಚಿತ್ರಗಳನ್ನು ನೇರವಾಗಿ ಡಬ್ ಮಾಡಿ ಬಿಡುಗಡೆ ಮಾಡಿ ವ್ಯಾಪಾರ ಹೆಚ್ಚಿಸಿಕೊಂಡರು. ಈ ಸಂದರ್ಭದಲ್ಲೂ ಹಿಂದಿ ನಟರು ದಕ್ಷಿಣದ ಚಿತ್ರಗಳಿಗೇ ಜೋತು ಬಿದ್ದು ತಮ್ಮ ಮಾರುಕಟ್ಟೆ ಕಾಯ್ದುಕೊಳ್ಳಬೇಕಾಯಿತು. ಅಜಯ ದೇವಗನ್ ಅಭಿನಯದ ಎಷ್ಟೋ ಚಿತ್ರಗಳು ದಕ್ಷಿಣದ ಚಿತ್ರಗಳ ರಿಮೇಕ್ ಆಗಿವೆ. ಎಲ್ಲರಿಗೂ ಚಿರಪರಿಚಿತ ಆದ ‘ಸಿಂಘಮ್’ ಅವುಗಳಲ್ಲಿ ಒಂದು. ಮಣಿರತ್ನಮ್ ನಿರ್ಮಾಣದ ರೋಜಾ, ಬಾಂಬೆ ಆದಿ ತಮಿಳು ಚಿತ್ರಗಳಂತೆ ಈಗ ತೆಲುಗಿನ ನಿರ್ದೇಶಕ ರಾಜಮೌಳಿ ನಿರ್ಮಾಣದ ‘ಈಗಾ’ ರಾಷ್ಟ್ರಾದ್ಯಂತ ಗಳಿಸಿದ ಯಶಸ್ಸು ಸಿನೆಮಾಕ್ಕೆ ದೇಶ ಭಾಷೆಗಳ ಗಡಿ ಇಲ್ಲ ಎಂಬುದು ಮತ್ತೆ ಸಾಬೀತು ಮಾಡಿವೆ. ರಾಜಮೌಳಿ ಅವರದ್ದೇ ನಿರ್ದೇಶನದ ‘ಬಾಹುಬಲಿ’ ಸರಣಿ ಗಳಿಸಿದ ಯಶಸ್ಸಿನ ಬೆನ್ನ ಹಿಂದೆಯೇ ಅವರದ್ದೇ ‘ಆರ್‍ಆರ್‍ಆರ್’ ಗಳಿಸಿರುವ ಯಶಸ್ಸು ಕೂಡ ಗಮನಿಸುವಂಥದ್ದು.

ಇದರ ಬೆನ್ನಿಗೇ ತೆರೆ ಕಂಡ ‘ಕೆಜಿಎಫ್’ ಒಂದು ಮತ್ತು ಎರಡನೇ ಭಾಗದ ಚಿತ್ರಗಳು ಯಾರೂ ಊಹಿಸಿದಷ್ಟು ಯಶಸ್ಸು ಕಂಡಿದ್ದು ಹಿಂದಿ ಚಿತ್ರರಂಗದ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಿಂದಿ ಚಿತ್ರರಂಗದ ನಟರ ನಡುವೆ ರಾಜಕೀಯ ಹೆಚ್ಚು. ಅಲ್ಲಿ ಉಳಿದುಕೊಳ್ಳುವುದೇ ಭಾರಿ ಕಷ್ಟ. ಅಂಥದ್ದರಲ್ಲಿ, ಉತ್ತಮ ಕಥಾವಸ್ತು ಮತ್ತು ಅತ್ಯುತ್ತಮ ನಿರ್ಮಾಣ ಮೌಲ್ಯಗಳಿಂದ ದಕ್ಷಿಣದ ಚಿತ್ರಗಳು ಬಿಡುಗಡೆ ಆಗುತ್ತಾ ಹೋದರೆ ತಮಗೆ ಉಳಿಗಾಲ ಇಲ್ಲ ಎಂದು ಅರಿವಾಗಿದ್ದು ಸಹಜ. ರಿಮೇಕ್ ಮೂಲಕವೇ ಜೀವ ಉಳಿಸಿಕೊಂಡಿರುವ ಅಜಯ ದೇವಗನ್, ಅದಕ್ಕೊಂದು ಮಾತಿನ ಸ್ವರೂಪ ನೀಡಿ ಭಾಷಾ ಸಮಸ್ಯೆ ಉದ್ಭವಿಸುವಂತೆ ಮಾಡಿದ್ದಾನೆ. ಇದರಲ್ಲಿ ಎರಡು ರೀತಿಯ ಲಾಭ ಅವನಿಗೆ ಇತ್ತು. ದಕ್ಷಿಣದವರು ಪ್ಯಾನ್ ಇಂಡಿಯಾ ಸಿನೆಮಾ ನಿರ್ಮಾಣ ನಿಲ್ಲಿಸಿದರೆ ಅವನ ರಿಮೇಕ್ ಸಿನೆಮಾಗಳಿಗೆ ಅವಕಾಶ ಸಿಗುತ್ತದೆ. ಎರಡನೆಯದಾಗಿ ಹಿಂದಿ ಪರ ನಿಂತರೆ ತಾನು ದೆಹಲಿಯ ಅಧಿಕಾರಸ್ಥರಿಗೆ ಹತ್ತಿರ ಆಗಬಹುದು ಎಂಬ ಆಸೆ.

“ಹಿಂದಿ ಭಾಷೆ ಬರದವರು ವಿದೇಶಿಗರು, ಅಂಥವರು ದೇಶ ಬಿಟ್ಟು ತೊಲಗಬೇಕು” ಎಂದು ಉತ್ತರ ಪ್ರದೇಶದ ತಲೆತಿರುಕ ಮಂತ್ರಿಯೊಬ್ಬ ಹೇಳಿಕೆ ನೀಡಿದ್ದಾನೆ. ಅಧಿಕಾರಸ್ಥರ ಸಂವಿಧಾನ ವಿರೋಧಿ ಹೇಳಿಕೆಗಳು ಈಗ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಭಾಷೆ ಬಹಳ ಸೂಕ್ಷ್ಮ ವಿಷಯ. ಅದನ್ನು ಬಳಸುವಾಗ ಸ್ವಲ್ಪವೂ ಎಚ್ಚರ ತಪ್ಪಬಾರದು. ಈಗಿನ ಬೆಳವಣಿಗೆಯಿಂದ ಒಂದಂತೂ ನಿಜ. ಐದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವ ಮತ್ತು ಬೆಳವಣಿಗೆ ಕಂಡಿರುವ ದಕ್ಷಿಣ ಭಾರತದ ಭಾಷೆಗಳು ತಮ್ಮ ಗಟ್ಟಿ ನೆಲೆಯಿಂದಾಗಿ ಕೆಲವೇ ನೂರು ವರ್ಷಗಳ ಹಿಂದೆ ಹುಟ್ಟಿದ ಹಿಂದಿಗೆ ಮಣಿಯುವುದು ಸಾಧ್ಯವೇ ಇಲ್ಲ ಎಂದು ಮತ್ತೆ ಸಾಬೀತು ಮಾಡಿವೆ. ಆದರೆ ಭಾಷೆಯನ್ನು ತಮ್ಮ ಭಂಡಾಟಗಳಿಗೆ ಬಳಸಿಕೊಳ್ಳುವ ಜನರಿಗೆ ಇದೊಂದು ಒಳ್ಳೆಯ ಪಾಠ ಆಗಲಿ, ರಾಜಕೀಯ ಭಂಡರೂ ಇದರಿಂದ ಪಾಠ ಕಲಿಯಲಿ ಎಂದು ಆಶಿಸೋಣ.
-ಎ.ಬಿ.ಧಾರವಾಡಕರ

You might also like
Leave a comment