This is the title of the web page

ಶಾಲೆಗೆ ಹೊರಟೆವು ನಾವು

ಗುರುಕುಲ ಮತ್ತು ಮಠಗಳಿಂದ ಶಾಲೆಯ ಕಡೆ ನಮ್ಮ ಸಮಾಜ ಹೊರಳಿದ್ದು ಬ್ರಿಟಿಷರು ಇಲ್ಲಿ ಬಂದ ನಂತರ. ನಮ್ಮಲ್ಲಿ ಓದಿನ ವಿದ್ಯೆಗಿಂತ ಬದುಕು ಕೊಡ ಮಾಡುವ ವಿದ್ಯೆ ಮುಖ್ಯ ಎಂದು ಜನ ಆಗ ಭಾವಿಸಿದ್ದರು. ಹಾಗಾಗಿಯೇ ಕೃಷಿ, ಕರಕುಶಲ ಕಲೆ, ಕಲಾ ಪ್ರಕಾರಗಳಲ್ಲಿ ಮನೆಯವರೇ ಮಕ್ಕಳಿಗೆ ತರಬೇತಿ ನೀಡಿ ತಯಾರು ಮಾಡುತ್ತಿದ್ದರು. ಓದಿದವರಿಗೆ ಬುದ್ಧಿ ಇರದು ಎಂಬುದು ಒಂದು ಸಾರ್ವತ್ರಿಕ ನಂಬಿಕೆ ಆಗಿತ್ತು. ಶಾಲೆಗಳು ಆರಂಭ ಆದ ಮೇಲೂ, ಅವು ವಿರಳ ಆಗಿದ್ದುದರಿಂದ ಅಲ್ಲಿ ಕಲಿಯಲು ಬರುವವರು ಹೆಚ್ಚು ಇರುತ್ತಿರಲಿಲ್ಲ. ಇಂಗ್ಲೀಷ ಆಡಳಿತ ಭಾಷೆ ಮತ್ತು ಮಾಧ್ಯಮದ ಭಾಷೆ ಆಗಿದ್ದರಿಂದ ಅಲ್ಲಿ ಅಭ್ಯಾಸ ಮಾಡಿ ಅಂಕ ಗಳಿಸುವುದು ಸುಲಭ ಆಗಿರಲಿಲ್ಲ. ಅದರಲ್ಲೂ ಹಳ್ಳಿಗಾಡಿನ ಜನರಿಗೆ ಅದೊಂದು ಬ್ರಹ್ಮವಿದ್ಯೆಯಂತಿತ್ತು. ಬುದ್ಧಿವಂತನೊಬ್ಬ ಹೈಸ್ಕೂಲ್ ಶಿಕ್ಷಣ ಪಡೆಯಲು ದೂರದ ಊರುಗಳಿಗೆ ಹೋಗಬೇಕಾದಾಗ ಊರಿನ ಹಿರಿಯರು ಸೇರಿ ಆತನನ್ನು ಕಲಿಯಲು ಕಳಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತಿದ್ದರು. ಕಳಿಸಲೇಬೇಕಾದ ಪರಿಸ್ಥಿತಿ ಬಂದಾಗ ಆ ವ್ಯಕ್ತಿಯಿಂದ ಹಲವು ರೀತಿಯ ನೀತಿ ನಡಾವಳಿಗಳ ಪಾಲನೆ ಕಟ್ಟುನಿಟ್ಟಾಗಿ ಆಗುವಂತೆ ಭರವಸೆ ಪಡೆಯುತ್ತಿದ್ದರು. (ಗಾಂಧೀಜಿ ಇಂಗ್ಲೆಂಡಿಗೆ ತೆರಳುವ ಮುನ್ನ ಮದ್ಯ, ಮಾಂಸದಿಂದ ದೂರ ಇರುತ್ತೇನೆ ಎಂದು ಅವರ ತಾಯಿ ವಾಗ್ದಾನ ಪಡೆದುಕೊಂಡಿದ್ದನ್ನು ಓದಿದ್ದು ಕೆಲವರಿಗೆ ನೆನಪಿರಬಹುದು). ಬಾಯಿ ಲೆಕ್ಕಾಚಾರ, ಗದುಗಿನ ಭಾರತ ಮತ್ತು ಜೈಮಿನಿ ಗ್ರಂಥಗಳು ಕಂಠಸ್ಥವಾದರೆ ಸಾಕು, ಆತ ಕಲಿತವನು ಎನ್ನುವ ಉಪಾದಿ ದೊರೆಯುತ್ತಿತ್ತು.

ಸ್ವಾತಂತ್ರ್ಯಾ ನಂತರ ಶಾಲೆಗಳ ಸಂಖ್ಯೆ ಹೆಚ್ಚಿತು. ಒಂದೆಡೆ ವಯಸ್ಕರ ಶಿಕ್ಷಣಕ್ಕೆ ಒತ್ತು ನೀಡಲು ಬೇರೊಂದು ಇಲಾಖೆಯೇ ಆರಂಭ ಆಯಿತು, ಜೊತೆಗೆ ಕಡ್ಡಾಯ ಶಿಕ್ಷಣ ಕೂಡ ಜಾರಿಗೆ ಬಂತು. ಸರ್ಕಾರಿ ಶಾಲೆಗಳ ಮೇಷ್ಟ್ರುಗಳು ಮನೆ ಮನೆಗೆ ಹೋಗಿ ಐದು ವರ್ಷ ತುಂಬಿದ ಮಕ್ಕಳನ್ನು ಹಿಡಿದು ತರುವ ಪರಿಪಾಠ ಆರಂಭ ಆಯಿತು. ಶಾಲೆ ಆರಂಭದ ಸಮಯಕ್ಕೆ ಮಕ್ಕಳು ಅತ್ತು, ರಂಪಾಟ ಮಾಡಿ ಶಾಲೆ ತಪ್ಪಿಸಲು ಯತ್ನಿಸುತ್ತಿದ್ದುದು ಆಗ ಸಾಮಾನ್ಯ ಸಂಗತಿ ಎನಿಸಿತ್ತು. ಶಾಲೆಗೆ ಬರಲು ನಿರಾಕರಿಸಿ ಮೊಂಡುತನ ಮಾಡುವ ಮಕ್ಕಳನ್ನು ಕೈ ಕಾಲು ಕಟ್ಟಿ ಹೊತ್ತು ತಂದು ಶಾಲೆಯಲ್ಲಿ ಕೂರಿಸುವುದು ನಡೆಯುತ್ತಿತ್ತು. ಶಾಲೆ ಕಲಿತು ಏನು ಪ್ರಯೋಜನ ಎನ್ನುತ್ತಿದ್ದ ತಂದೆ ತಾಯಿಗಳು, ಶಾಲೆ ಸಿಬ್ಬಂದಿ ಜೊತೆ ಜಗಳಕ್ಕೆ ನಿಲ್ಲುತ್ತಿದ್ದರು. ಮನೆ ಕೆಲಸ ತಪ್ಪಿಸಿ ಶಾಲೆಗೆ ಬಂದ ಹುಡುಗನನ್ನು ದಂಡಿಸುತ್ತಿದ್ದ ಮೇಷ್ಟ್ರನ್ನು ಕಂಡು ‘ಇನ್ನೂ ನಾಲ್ಕು ಸರಿಯಾಗಿ ಬಾರಿಸಿ, ಮನೆಯಲ್ಲಿ ದನ ಮೇಯಿಸೋಕ್ಕೆ ಯಾರೂ ಇಲ್ಲ. ಆದರೆ, ಇವನು ಇಲ್ಲಿ ಬಂದು ತಪ್ಪಿಸಿಕೊಂಡು ಕೂತಿದ್ದಾನೆ’ ಎನ್ನುವ ತಂದೆ-ತಾಯಿ ಇರುತ್ತಿದ್ದರು. ಬಡತನ ಎಷ್ಟಿತ್ತು ಎಂದರೆ ಢಗಳು ಅಂಗಿ ಹಾಕಿಕೊಂಡು ಚಡ್ಡಿ ಇಲ್ಲದೇ ಶಾಲೆಗೆ ಬರುತ್ತಿದ್ದ ಮಕ್ಕಳೂ ಇದ್ದರು.

ಚಡ್ಡಿ ಹಾಕದೇ ಇರುವ ಮಕ್ಕಳನ್ನು ದಂಡಿಸಿ ಮನೆಗೆ ವಾಪಸ್ಸು ಕಳಿಸಿದಾಗ, ತಂದೆ ತಾಯಂದಿರು ಬಂದು ಮೇಷ್ಟ್ರುಗಳ ಜೊತೆ ಜಗಳವಾಡುತ್ತಿದ್ದರು. ಒಮ್ಮೆ ಶಾಲೆ ವಾತಾವರಣಕ್ಕೆ ಮಕ್ಕಳು ಒಗ್ಗಿದ ಮೇಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಆತ್ಮೀಯ ಸಂಬಂಧ ಮೂಡುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಬಡ ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡುವುದು, ಅನುಕೂಲ ಇಲ್ಲದ ವಿದ್ಯಾರ್ಥಿಯನ್ನು ತಮ್ಮದೇ ಮನೆಯಲ್ಲಿ ಇಟ್ಟುಕೊಂಡು ಶಾಲೆ ತಪ್ಪದಂತೆ ನೋಡಿಕೊಂಡ ಶಿಕ್ಷಕರೂ ಇದ್ದಾರೆ. ಅಂಥ ಎಷ್ಟೋ ಮಕ್ಕಳು ಬೆಳೆದು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಈ ಸಮಾಜದ ಹೆಮ್ಮೆಯ ಮಾದರಿ ಆಗಿದ್ದಾರೆ. ಅದಕ್ಕೆ ಮಾನವೀಯ ಮೌಲ್ಯ ಹೊಂದಿದ್ದ ಸಮರ್ಥ ಶಿಕ್ಷಕರು ಕಾರಣ.

ಏನೇ ಆದರೂ ಹಳ್ಳಿಗಾಡಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಸರ್ಕಾರಕ್ಕೂ ದೊಡ್ಡ ತಲೆನೋವಾಗಿತ್ತು. ಅದರಲ್ಲೂ ಶಾಲೆಗೆ ಬಾರದ ಮಕ್ಕಳನ್ನು ಕರೆ ತರುವುದು ದೊಡ್ಡ ಹೊರೆ. ಅಂಥ ವೇಳೆ ಪ್ರಧಾನಿ ಅಟಲ್ ಬಿರಿ ವಾಜಪೇಯಿ ಅವರು ಎಳೆ ಮಕ್ಕಳಲ್ಲಿ ಸ್ಪೂರ್ತಿ ತುಂಬಿ ಶಾಲೆಗೆ ಬರುವಂತೆ ಮಾಡುವ ‘ಸ್ಕೂಲ್ ಚಲೇ ಹಮ್’ ಘೋಷಣೆ ಜಾರಿಗೆ ತಂದರು. ಆಗ ಅವರೇ ಖುದ್ದು ಘೋಷಣೆ ಮೊಳಗಿಸಿದರು. ದೂರದರ್ಶನ, ರೇಡಿಯೋಗಳಲ್ಲಿ ಬೆಳಗಾದರೆ ‘ಶಾಲೆಗೆ ಹೊರಟೆವು ನಾವು’ ಎಂಬ ಹಾಡು ಮೊಳಗುತ್ತಿತ್ತು.

ಈಗ ಕಾಲ ಬದಲಾಗಿದೆ. ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ, ಖಾಸಗಿ ಶಾಲೆಗಳು ವಿಜೃಂಭಿಸುವಂತೆ ಮಾಡಲಾಗಿದೆ. ಮಕ್ಕಳಲ್ಲಿ ಸಮಾನತೆ ಮೂಡಿಸಲೆಂದು ಸಮವಸ್ತ್ರ ತರುವ ಚಿಂತನೆ ಹಲವೆಡೆ ನಿಜಕ್ಕೂ ಒಳ್ಳೆಯ ಪರಿಣಾಮ ಬೀರಿತು. ಆದರೂ ಬಡ ಮಕ್ಕಳು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಯಾವೊಂದು ಸಮವಸ್ತ್ರವೂ ಮುಚ್ಚಿಡಲು ಸಾಧ್ಯ ಆಗಲಿಲ್ಲ ಎನ್ನುವುದನ್ನು ಗಮನಿಸಬೇಕು. ಈಗಂತೂ ಖಾಸಗಿ ಶಾಲೆಗಳ ಮಕ್ಕಳು ವಿಮಾನವೇರಿ ದೇಶ ವಿದೇಶಗಳ ಪ್ರವಾಸಕ್ಕೆ ಹೋಗುವ ಪರಿಪಾಠ ಬೆಳೆದಿದೆ. ಅದೇ ಶಾಲೆಯ, ಅಷ್ಟು ಹಣ ತೆರಲಾರದ ಮಕ್ಕಳು ಪ್ರವಾಸದಿಂದ ವಂಚಿತರಾಗುತ್ತಾರೆ, ಅವರಲ್ಲಿ ಕೀಳರಿಮೆ ಮೂಡುತ್ತದೆ. ಆದರೆ ಹಣ ಮಾಡುವುದು ಮುಖ್ಯ ಉದ್ದೇಶ ಆಗಿರುವ ಖಾಸಗಿ ಶಾಲೆಗಳಲ್ಲಿ ಅನುಕೂಲದ ಹೆಸರಲ್ಲಿ ಹಣದ ಸುಲಿಗೆ ನಡೆಯುತ್ತದೆ.

ಹಿಂದೊಂದು ಕಾಲಕ್ಕೆ ಸರ್ಕಾರಿ ಶಾಲೆಗಳಲ್ಲಿ ಸಾಲು ಮಣೆಗಳ ಮೇಲೆ ಕುಳಿತು ಅಕ್ಷರ ಕಲಿತವರು ಮಹತ್ವದ ಸಾಧನೆ ಮಾಡಿರುವುದನ್ನು ಕಾಣುತ್ತೇವೆ. ಉತ್ತರ ಕರ್ನಾಟಕದ ಬಹುಪಾಲು ಜನ ಇವನ್ನು ‘ಸಾಲಿ ಗುಡಿ’ ಎನ್ನುತ್ತಿದ್ದರು. ಬಹುತೇಕ ಸರ್ಕಾರಿ ಶಾಲೆಗಳು ನಡೆಯುತ್ತಾ ಇದ್ದುದು ಗುಡಿ ಮತ್ತು ಮಠಗಳಲ್ಲಿ ಎನ್ನುವ ಕಾರಣಕ್ಕೂ ಈ ಮಾತು ಹುಟ್ಟಿರಬಹುದು. ಈಗ ಉತ್ತಮ ಶಿಕ್ಷಣ ಎಂದರೆ ಹೆಚ್ಚು ಸವಲತ್ತುಗಳು ಇರುವ ಶಾಲೆಗಳು ನೀಡುವ ಶಿಕ್ಷಣ ಎಂಬ ಭ್ರಮೆ ದಟ್ಟವಾಗಿದೆ. ಅದರಲ್ಲೂ ವಸತಿ ಶಾಲೆಗಳಲ್ಲಿ ಕಲಿಯುವ ಹುಡುಗ, ಹುಡುಗಿಯರು ನಿರ್ಬಂಧ ಇಲ್ಲದ ಕಾರಣ ಹಾದಿ ಬಿಡುವ, ಮಾದಕ ವ್ಯಸನಗಳಿಗೆ ದಾಸರಾಗುವ ಉದಾಹರಣೆಗಳನ್ನೂ ಈಗ ಕಾಣುತ್ತೇವೆ.

ಶಾಲೆಗೆ ಹೋಗುವುದು ಎಂದರೆ ಅರಿವಿನ ಬೆಳಕಿಗೆ ಮನಸ್ಸು ತೆರೆದುಕೊಳ್ಳುವುದು ಎಂಬ ಭಾವನೆ ಹೋಗಿ, ಬೇರೆ ರೀತಿಯ ನಾನಾ ಆಯಾಮಗಳನ್ನು ಪಡೆದುಕೊಂಡಿದೆ. ಮನೆಯಲ್ಲಿ ಆಡುವ ಭಾಷೆಗೆ ಪೆಟ್ಟು ಬಿದ್ದು, ಇಂಗ್ಲೀಷ ಕಲಿಕೆಯೇ ಮುಖ್ಯ ಎನಿಸಿದೆ. ಕೊನೆಗೆ ಮನೆ ಮಾತೂ ಸರಿಯಾಗಿ ಕಲಿಯದೇ, ಇಂಗ್ಲೀಷ ಸಹ ಬಾರದೇ ಎಡಬಿಡಂಗಿಗಳಾಗಿರುವ ಎಷ್ಟೊಂದು ಜನರನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಇದರ ನಡುವೆ ಶಾಲಾ ಶಿಕ್ಷಣದಿಂದ ಕೆಲವರು ವಂಚಿತರಾಗುವ ಪರಿಸ್ಥಿತಿ ಸದ್ದಿಲ್ಲದೇ ಈಗ ಮೂಡಿ ನಿಂತಿದೆ. ಇದೇ ಬಿಜೆಪಿ ಆಡಳಿತದ ಕಾಲಕ್ಕೆ ಚಾಲ್ತಿಗೆ ಬಂದ ‘ಶಾಲೆಗೆ ಹೊರಟೆವು ನಾವು’ ಬದಲಿಗೆ ‘ಶಾಲೆಗೆ ಹೋಗುವುದಿಲ್ಲ’ ಎಂದು ಪಟ್ಟು ಹಿಡಿಯುವ, ಅದಕ್ಕಿಂತ ಹೆಚ್ಚಾಗಿ ‘ಶಾಲೆಗೆ ಸೇರಿಸುವುದಿಲ್ಲ’ ಎಂಬ ಮನೋಭಾವ ದಟ್ಟ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಬದಲಾವಣೆ ಅಗತ್ಯ ನಿಜ, ಆದರೆ ಯಾವ ದಿಕ್ಕಿನಲ್ಲಿ ಬದಲಾವಣೆ ಮತ್ತು ಯಾವ ರೀತಿ ಎಂಬುದು ಮುಖ್ಯ ಅಲ್ಲವೇ? ಅಫಘಾನಿಸ್ತಾನದಲ್ಲಿ ಮಹಿಳೆಯರು ಮನೆಯಿಂದ ಹೊರಗೇ ಬರಬಾರದು ಎಂದು ಕಾನೂನು ಮಾಡಿದ್ದನ್ನು ಖಂಡಿಸುವ ನಾವು, ಇಲ್ಲಿ ಅದೇ ರೀತಿಯ ಮತ್ತೊಂದು ನಿರ್ಬಂಧ ಹೇರುತ್ತಿದ್ದೇವೆ ಎನ್ನುವುದನ್ನು ಮರೆಯುತ್ತಿದ್ದೇವೆ.

-ಎ.ಬಿ.ಧಾರವಾಡಕರ

You might also like
Leave a comment