This is the title of the web page

ಪಿಎಸ್ಆಯ್ ನೇಮಕಾತಿ; ನ್ಯಾಯ ಸಿಗದಿದ್ದರೆ ಭಯೋತ್ಪಾದಕರಾಗುತ್ತೇವೆ ಎಂದು ಪ್ರಧಾನಿಗೆ ಪತ್ರ

ಬೆಂಗಳೂರು, ೧೬- ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಬಯಲಿಗೆ ಬಂದು ಕರ್ನಾಟಕ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿ ತೀರ್ಮಾನ ತೆಗದುಕೊಂಡಿದ್ದನ್ನು ವಿರೋಧಿಸಿ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳು ಪ್ರಧಾನ ಮಂತ್ರಿಗಳಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ತಮಗೆ ನ್ಯಾಯ ದೊರೆಯದಿದ್ದರೆ ತಾವು ಭಯೋತ್ಪಾದಕರು ಇಲ್ಲವೇ ನಕ್ಸಲೀಯರು ಆಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನೊಂದ ಪಿಎಸ್‌ಐ ಅಭ್ಯರ್ಥಿಗಳು ಪ್ರಧಾನಿ ಮೋದಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ಪುಟಗಳ ಪತ್ರ ಬರೆದು ನ್ಯಾಯ ಒದಗಿಸುವಂತೆ ಅವರು ಮನವಿ ಮಾಡಿದ್ದು ಆದರೆ ಪತ್ರ ಬರೆದವರು ಯಾರು ಎಂಬುದು ತಿಳಿದು ಬಂದಿಲ್ಲ. ತಮ್ಮ ಹೆಸರನ್ನು ಪತ್ರದಲ್ಲಿ ನಮೂದಿಸಿಲ್ಲ. ಪಿಎಸ್‌ಐ ಪರೀಕ್ಷೆ ಆಯ್ಕೆಯಲ್ಲಿ ಮೋಸ ಆದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಿ. ಆದರೆ ನಿಯತ್ತಿನಿಂದ ಬರೆದವರಿಗೆ ಮೋಸ ಆಗಬಾರದು ಎಂದು ಬರೆಯಲಾಗಿದೆ.

2021ರಲ್ಲಿ ನಡೆದ ಎಫ್​ಡಿಎ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತನಿಖೆ ಮಾಡಿ ನ್ಯಾಯ ಕೊಡಿಸುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ನ್ಯಾಯ ಕೊಡಿಸದಿದ್ದರೆ ನಾವು ಮುಂದೆ ಭಯೋತ್ಪಾದಕರೊಂದಿಗೆ ಕೈಜೋಡಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಎನ್ನುವಂಥ ವ್ಯವಸ್ಯೆ ಬಂದು ಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತು ಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆಗಳ ಪರೀಕ್ಷೆಗಳನ್ನು ಬರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಭಯೋತ್ಪಾದಕರೋ ಅಥವಾ ನಕ್ಸಲೀಯ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ. ನಾವು ಎಂಟು ಮಂದಿ ಇದ್ದೇವೆ. ನಾವೆಲ್ಲರು ಈ ನಿರ್ಧಾರ ಮಾಡಿದ್ದೇವೆ ಎಂದು ನೊಂದ ಪಿಎಸ್‌ಐ ಅಭ್ಯರ್ಥಿಗಳು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖವಾಗಿದೆ.

You might also like
Leave a comment